ಯಾದಗಿರಿ/ಸುರಪುರ: ದೇಶದಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದರು ಇಲ್ಲಿನ ವಾರದ ಸಂತೆ ಮಾತ್ರ ಯಾರ ಅಡೆತಡೆಯಿಲ್ಲದೇ ನಡೆದಿದೆ.
ದೇಶದಲ್ಲಿನ ಜನರನ್ನು ಕೊರೊನಾ ಸೊಂಕಿನಿಂದ ರಕ್ಷಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಜನರು ಗುಂಪಾಗಿ ಸೇರದಂತೆ, ಯಾವುದೇ ಸಭೆ ಸಮಾರಂಭ, ಜಾತ್ರೆ ಸಂತೆಗಳನ್ನು ನಡೆಸದಂತೆ ಆದೇಶ ಹೊರಡಿಸಲಾಗಿದೆ.
ಆದರೆ ತಾಲೂಕಿನ ನಗನೂರ ಗ್ರಾಮದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯನ್ನು ಎಂದಿನಂತೆ ನಡೆಸಿ ಲಾಕ್‌ಡೌನ್ ನಿಯಮ ಗಾಳಿಗೆ ತೂರಲಾಗಿದೆ. ಕೊರೊನಾ ಸೋಂಕು ಇರುವವರು ಇಂತಹ ಸಂತೆಯಲ್ಲಿ ಬಂದಿದ್ದರೆ ಜನರ ಗತಿ ಏನು ಎಂದು ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.