ಸುರಪುರ (ಯಾದಗಿರಿ): ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ), ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ ಸಂಘಟನೆಗಳು ಜಂಟಿಯಾಗಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದವು.
ನಗರದ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆ ಮರಗಳನ್ನು ಬೆಳೆಸುವ ನೆಪದಲ್ಲಿ ಭ್ರಷ್ಟಾಚಾರ ನಡೆಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ನಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿಯನ್ನು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಅವರ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಪ್ರಾದೇಶಿಕ ಅರಣ್ಯ ಕಚೇರಿ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆ ತಾಲೂಕಿನ ಎಲ್ಲ ಮುಖ್ಯರಸ್ತೆ ಹಾಗೂ ಗ್ರಾಮೀಣ ರಸ್ತೆಗಳ ಎರಡು ಬದಿಯಲ್ಲಿ ಪ್ರತಿ 10 ಫೀಟಿಗೆ ಒಂದರಂತೆ ಸಸಿಗಳನ್ನು ನೆಟ್ಟು, ಮೂರು ವರ್ಷಗಳವರೆಗೆ ಅವುಗಳ ಸಂರಕ್ಷಣೆ ಮಾಡಬೇಕೆಂಬ ನಿಯಮವಿದೆ. ಆದರೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಎರಡು ಕಚೇರಿಗಳು ತಾಲೂಕಿನ ಯಾವುದೇ ರಸ್ತೆಗಳಲ್ಲಿ ಸರಿಯಾಗಿ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಮಾಡುವುದನ್ನು ಮರೆತು ದಾಖಲಾತಿಗಳಲ್ಲಿ ಸುಳ್ಳು ಲೆಕ್ಕ ತೋರಿಸಿ ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದನ್ನು ಕೂಡಲೇ ತನಿಖೆಗೆ ಒಳಪಡಿಸಿ, ಇದರಲ್ಲಿ ಶಾಮೀಲಾಗಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.