ಸುರಪುರ: ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸುರಪುರ ಮತ್ತು ಹುಣಸಗಿ ತಾಲೂಕಿನ ಹತ್ತನೇ ತರಗತಿಯಲ್ಲಿ ಶೇ 90% ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಸವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಗರದ ರಂಗಂಪೇಟೆಯ ವೀರಶೈವ ಲಿಂಗಾಯಿತ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸುರಪುರ ತಾಲೂಕಿನ ಪ್ರತಿಭಾನ್ವಿತ 40 ಜನ ವಿದ್ಯಾರ್ಥಿಗಳು ಭಾಗವಹಿಸಿ ಬಸವ ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ವೀರಶೈವ ಲಿಂಗಾಯತ ಯುವ ವೇದಿಕೆಯು ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳನ್ನು ಗುರುತಿಸಿ ಬಸವ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರ ಬದುಕು ಉಜ್ವಲಗೊಳ್ಳಲು ಪ್ರೇರಣೆಯಾಗಿದೆ. ಇಂದು ಪುರಸ್ಕಾರ ಸ್ವೀಕರಿಸಿದ ಎಲ್ಲರೂ ಇನ್ನೂ ಉತ್ತಮವಾಗಿ ಅಭ್ಯಾಸ ಮಾಡಿ ಹೆಚ್ಚಿನ ಪ್ರಶಸ್ತಿಗಳು ದೊರೆಯುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಹುಣಸಗಿ ಮತ್ತು ಸುರಪುರ ತಾಲೂಕಿನ 40 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಿಷ್ಠಿ ಕಡ್ಲೆಪ್ಪನವರ ಮಠದ ಪ್ರಭುಲಿಂಗ ಸ್ವಾಮೀಜಿ ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಮುಖಂಡರಾದ ನಾಗಣ್ಣ ಸಾಹು ಇದ್ದರು.