ಯಾದಗಿರಿ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಹರಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕು ಬಂಡೋಳಿ ಗ್ರಾಮದ ತಿಂಥಣಿ ಬ್ರಿಡ್ಜ್ ಬಳಿ ನಡೆದಿದೆ.
ಹುಣಸಗಿ ತಾಲೂಕಿನ ಕಮಲಾಪುರದಿಂದ ದೇವದುರ್ಗ ಕಡೆ ಸುಮಾರು 150 ಕುರಿಗಳನ್ನು ಕುರಿಗಾಹಿಗಳು ಮೇಯಿಸಲು ತೆರಳುತ್ತಿರುವಾಗ ರಭಸದಿಂದ ಬಂದ ಟಿಪ್ಪರ್ ಕುರಿ ಹಿಂಡಿನ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.
ಕಮಲಾಪುರ ಗ್ರಾಮದ ಭೀಮಣ್ಣ ಹೊಸಮನಿ, ದ್ಯಾಮಣ್ಣ ಹೊಸಮನಿ ಎಂಬವರಿಗೆ ಸೇರಿದ ಕುರಿಗಳಾಗಿದ್ದು, ತಾಳಿಕೋಟಿಯಿಂದ ರಾಯಚೂರು ಕಡೆ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಟಿಪ್ಪರ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸುರಪುರ ತಹಶೀಲ್ದಾರ್ ನಿಂಗಪ್ಪ ಬಿರದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.