ಯಾದಗಿರಿ: ರಾಜ್ಯ ಸಚಿವ ಸಂಪುಟಕ್ಕೆ ಇಂದು ಹೊಸದಾಗಿ 24 ಸಚಿವರು ಸೇರ್ಪಡೆಯಾಗಿದ್ದು, ಯಾದಗಿರಿ ಜಿಲ್ಲೆಗೂ ಸಚಿವ ಸ್ಥಾನ ಒಲಿದಿದೆ. ಶಹಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಮೂರನೇ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ಧಾರೆ. ಹೀಗಾಗಿ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಶರಣಬಸಪ್ಪಗೌಡ ದರ್ಶನಾಪುರ ಅವರು 1994, 2004, 2008, 2018 ಮತ್ತು 2023 ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 5 ಬಾರಿಗೆ ಶಹಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಶಹಾಪುರದಿಂದ ಶಾಸಕರಾಗಿ ಮೊದಲ ಬಾರಿಗೆ ಚುನಾಯಿತರಾಗಿದ್ದ ಅವರು 1996 ರಲ್ಲಿ ಜೆ.ಎಚ್. ಪಟೇಲ್ ಕ್ಯಾಬಿನೆಟ್‌ನಲ್ಲಿ ಇಂಧನ ಸಚಿವರಾಗಿದ್ದರು. ಹೆಚ್ ಡಿ ಕುಮಾರಸ್ವಾಮಿ ಅವರ ಮೊದಲ ಕ್ಯಾಬಿನೆಟ್‌ನಲ್ಲಿ 18 ಫೆಬ್ರವರಿ 2006 ರಿಂದ 8 ಅಕ್ಟೋಬರ್ 2007 ರವರೆಗೆ ಕೃಷಿ ಮಾರುಕಟ್ಟೆ ಸಚಿವರಾಗಿ ಮತ್ತು ಕಲಬುರುಗಿ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2018 ರಲ್ಲಿ, ಅವರು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಫೆಬ್ರವರಿ 14, 2022 ರಂದು ಅವರು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ 11 ಇತರ ಶಾಸಕರೊಂದಿಗೆ ಕೆಕೆಆರ್ಡಿಬಿ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದರು. ಇದೀಗ ಮೂರನೇ ಬಾರಿಗೆ ಸಚಿವರಾಗಿ ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ. ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಸಣ್ಣ ಕೈಗಾರಿಕೆ ಖಾತೆ ಸಿಗುವ ಸಾಧ್ಯತೆ ಇದೆ.
ಈ ಹಿಂದೆ ಶರಣಬಸಪ್ಪಗೌಡ ದರ್ಶನಾಪೂರ್ ಅಧಿಕಾರದಲ್ಲಿದ್ದಾಗ ಕೈಗೊಂಡ ಅಭಿವೃದ್ದಿ ಕಾರ್ಯಗಳು: ಶಹಾಪುರ ನೂತನ ಬಸ್ ನಿಲ್ದಾಣ ನಿರ್ಮಾಣ, ತಾಲೂಕಿಗೆ 60 ಕೋಟಿ ರೂ. ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದು, ಭೀಮರಾಯನಗುಡಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆ, ಹತ್ತಿಗೂಡುರದಲ್ಲಿ 220 ಕೆವಿ ವಿದ್ಯುತ್ ಪರಿವರ್ತಕ ಘಟಕ ಸ್ಥಾಪನೆ. ಶಹಾಪುರದಲ್ಲಿ ಆಧುನಿಕ ಪದವಿ ಮಹಾವಿದ್ಯಾಲಯದ ಕಟ್ಟಡ ಮಂಜೂರಾತಿ, ಶಹಾಪುರ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ, ಕ್ಷೇತ್ರದ ಅನೇಕ ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹೀಗೆ ಅನೇಕ ಜನಪರ ಕಾರ್ಯಗಳು ಅವರು ಮಾಡಿದ್ದಾರೆ.
ಇದನ್ನೂ ಓದಿ:ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಎಸ್.ಎಸ್ ಮಲ್ಲಿಕಾರ್ಜುನ ಸೇರಿದಂತೆ ಕೆಲ ಸಚಿವರ ಪರಿಚಯ ಇಲ್ಲಿದೆ!
ಸಚಿವ ಸಂಪುಟಕ್ಕೆ ಸೇರ್ಪಡೆ ಶಿವಾನಂದ್ ಸಿದ್ದರಾಮಗೌಡ: ಇನ್ನು ಕಲ್ಯಾಣ ಕರ್ನಾಟಕ ಭಾಗದಿಂದ ಶಿವಾನಂದ್ ಸಿದ್ದರಾಮಗೌಡ ಪಾಟೀಲ್ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. 1992ರಲ್ಲಿ ಬಿಜಾಪುರ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಬ್ಯಾಂಕಿನ ಅಧ್ಯಕ್ಷರಾಗಿ ಚುನಾಯಿತರಾದಾಗ ಇವರು ಸ್ಥಳೀಯ ರಾಜಕಾರಣದಲ್ಲಿ ಮೂಚೂಣಿಗೆ ಬಂದರು. ಜೆಡಿಎಸ್ ಅಭ್ಯರ್ಥಿಯಾಗಿ ತಿಕೋಟಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಶಿವಾನಂದ ಪಾಟೀಲರು ಎಂ.ಬಿ. ಪಾಟೀಲ್ ವಿರುದ್ಧ ಸೋಲನುಭವಿಸಿದ್ದರು. ಆದರೆ, ತದನಂತರ 1994 ಹಾಗೂ 1999 ಎರಡೂ ಚುನಾವಣೆಗಳಲ್ಲಿ ಎಂ.ಬಿ. ಪಾಟೀಲರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದರು.
1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ 2004 ರ ಚುನಾವಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕರೆಗೆ ಓಗೊಟ್ಟು ಕಾಂಗ್ರೆಸ್ ಸೇರಿ ಬಸವನ ಬಾಗೇವಾಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಇವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಈಗ ಮೊತ್ತೊಮ್ಮೆ ಸಚಿವರಾಗಿ ಆಯ್ಕೆಯಾಗಿದ್ದಾರೆ.