ಸುರಪುರ(ಯಾದಗಿರಿ): ಸುರಪುರ ಮತ್ತು ಹುಣಸಗಿ ತಾಲೂಕಿನ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ರೈತರಿಗೆ ದೊರೆಯುತ್ತಿಲ್ಲ. ಕೂಡಲೇ ಈ ಸಮಸ್ಯೆ ನಿವಾರಿಸಬೇಕೆಂದು ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಅವರು ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಹವಾಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ನಿಂಗಣ್ಣ ಬಾಚಿಮಟ್ಟಿ, ಈಗ ರೈತರಿಗೆ ಅವಶ್ಯಕವಾಗಿ ಯೂರಿಯಾ ರಸಗೊಬ್ಬರ ಬೇಕಾಗಿದೆ. ಆದರೆ, ಗೊಬ್ಬರ ಮಾರಾಟಗಾರರು ರಸಗೊಬ್ಬರ ಅಭಾವವಿದೆ ಎಂಬ ನೆಪ ಹೇಳಿ 280 ರೂಪಾಯಿ ರಸೀದಿ ನೀಡಿ, 450 ರಿಂದ 500 ರೂಪಾಯಿಗಳನ್ನು ಪಡೆದುಕೊಂಡು ಒಂದು ಚೀಲ ಗೊಬ್ಬರ ನೀಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ.
ವಂಚನೆ ಮಾಡುತ್ತಿರುವ ಗೊಬ್ಬರ ಮಾರಾಟ ಅಂಗಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮಾಜಿ ಶಾಸಕರಾದ ರಾಜ ವೆಂಕಟಪ್ಪ ನಾಯಕ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.