ಸುರಪುರ: ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಂಘದ ವತಿಯಿಂದ ಸುರಪುರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆ 10 ಗಂಟೆ ಸುಮಾರಿಗೆ ನಗರದ ತಹಶೀಲ್ದಾರ್ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹಣಮಂತ ತಳವಾರ ಮಾತನಾಡಿ, ಬೇರೆ ಬೇರೆ ಕಡೆಗಳಲ್ಲಿ ತಳವಾರ ಸಮುದಾಯಕ್ಕೆ ಕೇಂದ್ರ ಸರ್ಕಾರದ ಆದೇಶದಂತೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುತ್ತಿದ್ದು, ನಮ್ಮ ತಾಲೂಕಿನಲ್ಲಿಯೂ ಕೂಡ ತಳವಾರ ಜನಾಂಗಕ್ಕೆ ಪ್ರಮಾಣಪತ್ರ ನೀಡಬೇಕು. ಇಲ್ಲಿಯೂ ಅನೇಕ ಕುಟುಂಬಗಳು ಪರಂಪರಾಗತವಾಗಿ ತಳವಾರಿಕೆ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದು, ಅಂತಹ ಎಲ್ಲಾ ಕುಟುಂಬಗಳಿಗೂ ಪ್ರಮಾಣಪತ್ರ ನೀಡಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಪಂಗಡದಲ್ಲಿ ಈಗಾಗಲೇ ಅನೇಕ ಸಮುದಾಯಗಳಿದ್ದು, ಅವುಗಳ ಜೊತೆಗೆ ತಳವಾರ ಸಮುದಾಯಕ್ಕೆ ಕೂಡ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿದಲ್ಲಿ ಈಗಿರುವ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ. ಆದ್ದರಿಂದ ಈಗಾಗಲೇ ಪರಿಶಿಷ್ಟ ಪಂಗಡದ ಅಡಿಯಲ್ಲಿರುವ ಸಮುದಾಯಗಳು ತಳವಾರ ಸಮುದಾಯಕ್ಕೆ ಪ್ರಮಾಣಪತ್ರ ದೊರೆಯಲು ಯಾವುದೇ ಅಡ್ಡಿ ಉಂಟು ಮಾಡಬಾರದು ಎಂದು ಅವರು ವಿನಂತಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ನಿಂಗಣ್ಣ ಬಿರಾದರ್ ಅವರಿಗೆ ಸಲ್ಲಿಸಿದರು.