ಸುರಪುರ: ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಕಲಬುರಗಿ, ಯಾದಗಿರಿ ಡಿಸಿಸಿ ಬ್ಯಾಂಕ್ ಮತ್ತು ಈಕರಾರಸಾ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಹಾಗೂ ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರು, ನಮ್ಮ ಡಿಸಿಸಿ ಬ್ಯಾಂಕ್ ಈಗಾಗಲೇ ಎರಡು ನೂರು ಕೋಟಿ ರೂಪಾಯಿ ನಷ್ಟದಲ್ಲಿದೆ. ಅದನ್ನು ಸರಿ ಮಾಡಿ ಇನ್ನೂ ಹೆಚ್ಚಿನ ಅನುದಾನವನ್ನು ತಂದು ಕಲಬುರಗಿ ಮತ್ತು ಯಾದಗಿರಿ ಭಾಗದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಅನ್ನು ರಾಜ್ಯದ ಪ್ರತಿಷ್ಠಿತ ಮೂರು ಸಹಕಾರಿ ಬ್ಯಾಂಕ್ಗಳಲ್ಲಿ ಒಂದನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಸಹಕಾರಿ ಸಂಘಗಳ ಸಂಖ್ಯೆ ಕಡಿಮೆ ಇದೆ. ರಾಜ್ಯದ ಬೇರೆ ಬೇರೆ ಭಾಗಕ್ಕೆ ಹೋಲಿಸಿದರೆ ನಮ್ಮಲ್ಲಿ ಸಹಕಾರ ಸಂಘಗಳು ತುಂಬಾ ಕಡಿಮೆ, ಇನ್ನೂ ಹೆಚ್ಚೆಚ್ಚು ಸಹಕಾರ ಸಂಘಗಳು ಇಲ್ಲಿ ಹುಟ್ಟಿಕೊಳ್ಳಬೇಕು. ಆ ಮೂಲಕ ರೈತರು ಮತ್ತು ಬಡ ಜನರ ಏಳಿಗೆಗೆ ಸಹಕಾರವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ಸುರೇಶ ಸಜ್ಜನ್, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಪಾಟೀಲ ಸೇರಿದಂತೆ ಇನ್ನೂ ಅನೇಕ ಜನ ಮುಖಂಡರು ಉಪಸ್ಥಿತರಿದ್ದರು.