ಯಾದಗಿರಿ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಇಲ್ಲಿನ ಲಿಂಗೇರಿ ಗ್ರಾಮದ ರಸ್ತೆಗಳು ಜಲಾವೃತವಾಗಿದ್ದು, ಗ್ರಾಮಸ್ಥರು ಓಡಾಡಲು ಪರದಾಡುವಂತಾಗಿದೆ.
ಗ್ರಾಮದಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿಯ ಜನ ಮಳೆ ನೀರಿನಿಂದ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ.
ಯಾದಗಿರಿ ತಾಲೂಕಿನ ಲಿಂಗೇರಿ ಗ್ರಾಮದ ಅಂಬೇಡ್ಕರ್ ನಗರದ ಬಡಾವಣೆಯ ನಿವಾಸಿಗಳಿಗೆ ಪ್ರತಿ ವರ್ಷ ಈ ಸಮಸ್ಯೆ ಎದುರಾಗುತ್ತಿದೆ. ಬಡಾವಣೆಯಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಯಲ್ಲಿ ಬಳಸಿದ ನೀರು ಕೂಡ ಮಳೆ ನೀರಿನಲ್ಲಿ ಬೆರೆತು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನ ಬದುಕುವಂತಾಗಿದೆ.
ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೂ ಯಾರೊಬ್ಬರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಮಳೆ ಬಂದರೆ ಸಾಕು ಬಡಾವಣೆಯ ಎಲ್ಲಾ ರಸ್ತೆಗಳು ಜಲಾವೃತಗೊಳ್ಳುವ ಮೂಲಕ ಇಲ್ಲಿಯ ಜನ ಹೊರಗಡೆ ಓಡಾಡಲು ಕೂಡ ನರಕ ಯಾತನೆ ಅನುಭವಿಸುವಂತಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಡವಾಣೆಯಲ್ಲಿ ಒಳ ಚರಂಡಿ ಕಾಮಗಾರಿ ಕೈಗೊಳ್ಳುವ ಮೂಲಕ ಮಳೆಗಾಲದಲ್ಲಿ ತಮಗೆ ಆಗುತ್ತಿರುವ ತೊಂದರೆಗೆ ಮುಕ್ತಿ ದೊರಕಿಸಿಕೊಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.