ಯಾದಗಿರಿ: ಕಳೆದ ಎರಡು ವರ್ಷದಿಂದ ಕೊರೊನಾ ಹೊಡೆತಕ್ಕೆ ಸಿಲುಕಿದ ಕುಂಬಾರರಿಗೆ ಈಗ ಮತ್ತೆ ಹೊಡೆತ ಶುರುವಾಗಿದೆ. ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕು ತರುತ್ತದೆ. ಆದರೆ ಈ ಬಾರಿ ಕುಂಬಾರರಿಗೆ ಮಾತ್ರ ಬೆಳಕಿನ ಹಬ್ಬ ಕತ್ತಲೆಯಾಗಿ ಮಾರ್ಪಟ್ಟಿದೆ.
ದೀಪಾವಳಿ ಹಬ್ಬ ಬಂತೆಂದರೆ ಕುಂಬಾರರಿಗೆ ಎಲ್ಲಿಲ್ಲದ ಕೈತುಂಬಾ ಕೆಲಸ ಇತ್ತು. ಪ್ರಸಕ್ತ ಬೆಳೆಯುತ್ತಿರುವ ಜಾಗತೀಕರಣದಲ್ಲಿ ಕುಂಬಾರರಿಗೆ ಬೇಡಿಕೆ ಇಲ್ಲದಂತಾಗಿದೆ. ಮಣ್ಣಿನ ಮಡಿಕೆ ದೀಪ ಮಾಡಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಕುಂಬಾರರ ಬದುಕು ಅಯೋಮಯವಾಗಿದೆ.
ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ಅವರ ಕುಟುಂಬವು ಸುಮಾರು ವರ್ಷಗಳಿಂದ ಕುಂಬಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಪ್ಲಾಸ್ಟಿಕ್ ಯುಗದಿಂದ ಕುಂಬಾರರ ಬದುಕು ಕಗ್ಗತ್ತಲಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿಯೂ ಕುಂಬಾರರಿಗೆ ಹೊಡೆತ ಬಿದ್ದಿದೆ. ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದ ಕುಂಬಾರರಿಗೆ ಈ ವರ್ಷ ಆದಾಯ ಕೈಕೊಟ್ಟಿದೆ. ಇದರಿಂದಾಗಿ ಕುಂಬಾರಿಕೆ ಮಾಡುತ್ತಿದ್ದ ಕುಟುಂಬಗಳು ಇಂದು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.
'ಕುಂಬಾರಿಕೆ ಎಂಬುದು ನಮಗೆ ಅಜ್ಜಿ-ಅಜ್ಜನ ಕಾಲದಿಂದಲೇ ಬಂದಿದೆ. ಈಗ ನಮಗೆ ದೀಪಾವಳಿಯಂದು ವ್ಯಾಪಾರ ತುಂಬಾ ಕಡಿಮೆಯಾಗಿದೆ. ಈಗೆಲ್ಲಾ ಪ್ಲಾಸ್ಟಿಕ್ ವಸ್ತುಗಳು ಬಂದಿರುವುದರಿಂದ ಮಣ್ಣಿನ ವಸ್ತುಗಳನ್ನು ಬಳಸುವುದು ತುಂಬಾ ಕಡಿಮೆಯಾಗಿದೆ' ಎನ್ನುತ್ತಾರೆ ಕುಂಬಾರರಾದ ಮಲ್ಲಿಕಾರ್ಜುನ.
ಹಣತೆ ತಯಾರಿಕೆ ಮಾಡಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಕುಂಬಾರರು ಹಣತೆಗಳ ಮಾರಾಟ ಕಡಿಮೆಯಾಗುತ್ತಿರುವುದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ಓದಿ: ಕಲಬುರಗಿ : ದೀಪಾವಳಿ ಬೋನಸ್‌ಗಾಗಿ ಒತ್ತಾಯ.. ಟವರ್ ಏರಿ ಪ್ರತಿಭಟಿಸಿದ ಕಾರ್ಮಿಕ