ಯಾದಗಿರಿ: ಸಿಗ್ನಲ್ ಜಂಪ್ ಮಾಡಿದ್ದಾನೆ ಎಂದು ವ್ಯಕ್ತಿಯೋರ್ವನಿಗೆ ಸಿಪಿಐ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಾಸ್ತ್ರಿ ಬಂಕ್ ಬಳಿ ಈ ಘಟನೆ ನಡೆದಿದೆ. ಬಸವರಾಜ ಹಾಗೂ ಆತನ ತಾಯಿ ಭೀಮವ್ವ ಎಂಬುವರು ಬೈಕ್ ಮೇಲೆ ಹೋಗುವಾಗ ಸಿಗ್ನಲ್ ಜಂಪ್ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಗಲಾಟೆ ನಡೆದು ಬಸವರಾಜನ ಮೇಲೆ ಸಿಪಿಐ ಶರಣಗೌಡ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆ ನಡೆದ ನಂತರ ಬಸವರಾಜನನ್ನು ಬಲವಂತವಾಗಿ ಜೀಪಿನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ದಂಡ ವಿಧಿಸಬೇಕಿತ್ತು. ಹಲ್ಲೆ ಯಾಕೆ ಮಾಡಬೇಕೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದು, ಸಿಪಿಐ ಶರಣಗೌಡರನ್ನು ಅಮಾನತು ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಋಷಿಕೇಶ್ ಭಗವಾನ್, ಘಟನೆ ಬಗ್ಗೆ ವರದಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತನೆ ಎಂದಿದ್ದಾರೆ.