ಯಾದಗಿರಿ/ಕಲಬುರಗಿ: ಯಾದಗಿರಿ ಮತ್ತು ಕಲಬುರಗಿಯಲ್ಲಿ ಇಂದು ಬೆಳಗ್ಗೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಪಿಎಫ್ಐ ಮುಖಂಡರನ್ನು ನ್ಯಾಯಾಂಗ ವಶಕ್ಕೆ ನೀಡಲು ತಾಲೂಕು ದಂಡಾಧಿಕಾರಿಗಳು ಆದೇಶ ಹೋರಡಿಸಿದ್ದಾರೆ.
ಕಲಬುರಗಿಯ ಇಕ್ಬಾಲ್ ಕಾಲೋನಿ ನಿವಾಸಿ ಮಜರ್ ಹುಸೇನ್ , ಮಿಲ್ಲತ್ ನಗರದ ಇಸಾಮೊದ್ದಿನ್ ಇಬ್ಬರ ಮನೆ ಮೇಲೆ ದಾಳಿ ನಡೆಸಿ ತೀವ್ರ ಶೋಧ ನಡೆಸಿ, ನಂತರ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬಳಿಕ ಕಲಬುರಗಿ ತಾಲೂಕು ದಂಡಾಧಿಕಾರಿ ಪ್ರಕಾಶ ಕುದರಿ ಅವರ ಮುಂದೆ ಇಬ್ಬರನ್ನು ಹಾಜರುಪಡಿಸಲಾಗಿತ್ತು. ಇಬ್ಬರನ್ನೂ 10 ದಿನ, ಬರುವ ಅಕ್ಟೋಬರ್ 7 ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ (ಕೆ) ಗ್ರಾಮದ ಪಿಎಫ್‌ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮೊಹ್ಮದ್ ಮೆಹಬೂಬ್ ರ(32) ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಸಂಘಟನೆ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ವಾರದ ಹಿಂದಷ್ಟೇ ದಾಳಿ ನಡೆಸಿ, ಅನೇಕರ ಬಂಧಿಸಿದ ಬೆನ್ನಲ್ಲೇ, ರಾಜ್ಯದ ವಿವಿಧೆಡೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ.
ಮಂಗಳವಾರ ಬೆಳ್ಳಂಬೆಳಗ್ಗೆ ನಗರದ ಪೊಲೀಸರು ನಡೆಸಿದ ದಾಳಿಯಲ್ಲಿ ಶಹಾಪುರದ ಮುನೀರ್ ಹಾಗೂ ಗೋಗಿ (ಕೆ) ಗ್ರಾಮದ ಬಂದೇನವಾಜ್ ಸೌದಾಗರ್ (29), ಶೇಖ್ ಅನ್ವರ್ ಮುಲ್ಲಾ (26), ಮೊಹ್ಮದ್ ಹಾಸೀಂ ಪಟೇಲ್ (25) ಹಾಗೂ ಮೊಹ್ಮದ್ ಮೆಹಬೂಬ್ (32) ಎಂಬುವವರನ್ನು ವಿಚಾರಣೆಗೆಂದು ವಶಕ್ಕೆ ಪಡೆದರು.
ಗೋಗಿ (ಕೆ) ಗ್ರಾಮದಲ್ಲಿ ಮೊಹಮ್ಮದ್ ಬಂಧನ ವೇಳೆ ಅವರ ಬೆಂಬಲಿಗರು ಪೊಲೀಸ್ ವಾಹನಕ್ಕೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗತೊಡಗಿದರು. ಪೊಲೀಸರ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಅಲ್ಲಿ ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿತ್ತು.
ಕಲಂ 107ರ ಸಿರ್ಪಿಸಿ ಪ್ರಕಾರ, ಭದ್ರತಾ ಕಲಂಗಳ ಅಡಿ ಪ್ರಕರಣ ದಾಖಲಿಸಿ, ವಿಚಾರಣೆಯ ನಂತರ ಬಂದೇನವಾಜ್, ಶೇಖ್ ಅನ್ವರ್ ಹಾಗೂ ಮೊಹ್ಮದ್ ಹಾಸೀಂ ಪಟೇಲ್, ಈ ಮೂವರನ್ನು ಬಿಡುಗಡೆಗೊಳಿಸಿದರೆ, ಮೆಹಬೂಬ್ ವಿರುದ್ಧ ಕಲಂ 107, 151 ಸಿರ್ಪಿಸಿ ರೀತ್ಯ ಭದ್ರತಾ ಕಲಂಗಳ ಅಡಿ ಪ್ರಕರಣ ದಾಖಲಿಸಿ, ವಿಚಾರಣೆ ನಂತರ ತಾಲೂಕು ದಂಡಾಧಿಕಾರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅ. 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಸುರಪುರ ಉಪಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಓದಿ: PFI, SDPI ಮುಖಂಡರ ಮನೆ ಮೇಲೆ ದಾಳಿ ನಡೆಸಿಲ್ಲ, ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ: ಸಿಎಂ