ಯಾದಗಿರಿ: ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಬೆಳೆಯುತ್ತಿದ್ದರೂ ಜನರು ಇನ್ನೂ ಮೌಢ್ಯತೆಯಿಂದ ಹೊರಬಂದಿಲ್ಲ. ಏನಾದರು ಕಹಿ ಘಟನೆಯಾದರೆ ಸಾಕು ದೇವರ ಶಾಪ ಎಂದು ಜನರು ದೇವರ ಮೊರೆ ಹೋಗುತ್ತಾರೆ. ಅಂತಹ ಘಟನೆಯು ಈಗ ಅನಪುರನಲ್ಲಿ ಕಾಣಿಸುತ್ತಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮವು ರಾಜ್ಯದ ಗಡಿಭಾಗದ ಗ್ರಾಮವಾಗಿದೆ. ತೆಲಂಗಾಣಕ್ಕೆ ಅಂಟಿಕೊಂಡಿರುವ ಅನಪುರ ಗ್ರಾಮದಲ್ಲಿ ಜನರು ದೇವಿಯ ಶಾಪ ತಟ್ಟಿದೆ ಎನ್ನುತ್ತಿದ್ದಾರೆ. ಗಡಿಗ್ರಾಮವಾದ ಅನಪುರ ಈಗ ರಾಜ್ಯ ಮಟ್ಟದಲ್ಲಿ ವಾಂತಿ ಭೇದಿಯ ಕಹಿ ಘಟನೆಯಿಂದ ಸದ್ದು ಮಾಡುತ್ತಿದೆ.
ನಾಲ್ಕು ದಿನಗಳಿಂದ ಇನ್ನೂ ವಾಂತಿ ಭೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಗ್ರಾಮದ ಜನರಿಗೆ ಪೂರೈಕೆ ಮಾಡಬೇಕಾದ ನೀರಿನ ಪೈಪ್ನಲ್ಲಿ ಕಲುಷಿತ ನೀರು ಸೇರ್ಪಡೆಯಾಗಿದೆ. ಪರಿಣಾಮ ನೀರು ಸೇವಿಸಿ ವಾಂತಿ ಭೇದಿಯಿಂದ ಮೂವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 80 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, 50 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡವರು ವಿವಿಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿ ಊರು ಸೇರಿದ್ದಾರೆ.
ಗಂಡಾಂತರ ಬಾರದಂತೆ ದೇವಿಯ ಮೊರೆ: ಈಗಾಗಲೇ ನೀರಿನ ಲ್ಯಾಬ್ ರಿಪೋರ್ಟ್ ಕೂಡ ಬಂದಿದ್ದು, ನಾಲ್ಕು ನೀರಿನ ಸ್ಯಾಂಪಲ್ ಲ್ಯಾಬ್ ರಿಪೋರ್ಟ್ ನೀರು ಕುಡಿಯಲು ಯೋಗ್ಯವಲ್ಲ ಎಂದು ಬಂದಿದ್ದು ಆಘಾತಕಾರಿಯಾಗಿದೆ. ಆದರೆ, ಈಗಾಗಲೇ ಗ್ರಾಮದಲ್ಲಿ ಆರೋಗ್ಯ ಇಲಾಖೆ, ಪಂಚಾಯತ್ ಅಧಿಕಾರಿಗಳು ಠಿಕಾಣಿ ಹೂಡಿ, ಕಾಯಿಸಿ ಆರಿಸಿ ನೀರು ಕುಡಿಯಲು ಸೂಚಿಸಿದ್ದಾರೆ. ಯಾವುದೇ ತೊಂದರೆಯಾಗದಂತೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ವಾಟರ್ ರಿಪೋರ್ಟ್ ಒಂದು ಕಡೆಯಾದರೆ, ಈಗ ಜನರು ದೇವಿಯ ಶಾಪದಿಂದಲೇ ವಾಂತಿ ಭೇದಿ ಕಾಣಿಸಿಕೊಂಡಿದೆ ಎಂದು ಮಾತನಾಡಿಕೊಂಡು ದೇವಿಯ ಪೂಜೆ ಮಾಡಿ, ಕರೆಪ್ಪತಾತಾ ಮಠದಿಂದ ವಾದ್ಯ ಮೇಳಗಳೊಂದಿಗೆ ದೇವಿಯ ಮೂರ್ತಿ ಪೂಜಿಸಿ, ಪ್ರತಿಷ್ಠಾಪನೆ ಮಾಡಿ, ಮತ್ತೆ ಗ್ರಾಮಕ್ಕೆ ಯಾವುದೇ ಗಂಡಾಂತರ ಬಾರದಂತೆ ದೇವಿಯ ಮೊರೆ ಹೋಗಿದ್ದಾರೆ.
ಹೌದು, ಅನಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಎಸ್ಸಿ ಬಡಾವಣೆಯಲ್ಲಿ ಕರೆಮ್ಮಾ ದೇವಿಯ ಚಿಕ್ಕದಾದ ಮಂದಿರವಿತ್ತು. ಭಕ್ತರು ದೇವಿಯ ಪೂಜೆ ಪುನಷ್ಕಾರ ಮಾಡಿ ಹರಕೆ ತಿರಿಸಿ ತಮ್ಮ ಕಷ್ಟದಿಂದ ಪಾರಾಗುತ್ತಿದ್ದರು. ಮಂದಿರ ಹೇಗೆ ಇತ್ತು ಎಂದು ಈ ದೃಶ್ಯ ನೋಡಬಹುದಾಗಿದೆ. ಆದರೆ, ಈಗ ಮಂದಿರ ಕೆಡವಲಾಗಿದೆ. ಸ್ವಲ್ಪ ದೊಡ್ಡದಾಗಿ ದೇವಿಯ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧಾರ ಮಾಡಿ, ಕಳೆದ ಜನವರಿ 22 ರಂದು ಕರೆಮ್ಮ ದೇವಸ್ಥಾನ ಕೆಡವಿದ್ರು.
ದೇವಿಯ ಶಾಪದಿಂದ ವಾಂತಿ ಭೇದಿ ಉಲ್ಬಣವಾಗಿರುವ ಬಗ್ಗೆ ಜನರಿಂದ ಚರ್ಚೆ : ದೇವಿಯ ಮೂರ್ತಿಯನ್ನು ಗ್ರಾಮದ ಕರೆಪ್ಪ ತಾತಾ ಮಠದ ಜಾಗದ ಕೋಣೆಯಲ್ಲಿ ಬೀಗ ಹಾಕಿ ಇಡಲಾಗಿದೆ. ಆದರೆ, ಬೇಗ ದೇವಸ್ಥಾನ ನಿರ್ಮಾಣ ಮಾಡದೆ ವಿಳಂಬ ಮಾಡುವ ಜೊತೆ ಕೋಣೆಯಲ್ಲಿದ್ದ ದೇವಿಯ ಮೂರ್ತಿಗೆ ಯಾರು ಪೂಜೆ ಮಾಡಿ ದೇವಿಯ ಮೇಲೆ ಭಕ್ತಿ ತೋರುವುದನ್ನು ಮರೆತು ಬಿಟ್ಟಿದ್ರು. ಹೀಗಾಗಿ, ಕರೆಮ್ಮ ದೇವಿಯ ಶಾಪದಿಂದಲೇ ಅನಪುರ ಊರಲ್ಲಿ ವಾಂತಿ ಭೇದಿ ಉಲ್ಬಣಗೊಂಡಿದೆ ಎಂದು ಗ್ರಾಮದ ವಿವಿಧೆಡೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ದೇವಿಯನ್ನು ಆರಾಧಿಸುವ ಮಹಿಳೆಯು ದೇವಿಯ ಶಾಪದಿಂದಲೇ ಗ್ರಾಮದಲ್ಲಿ ಸಮಸ್ಯೆ ಉಂಟಾಗಿದೆ. ದೇವಸ್ಥಾನ ಕೆಡವಿದ್ದ ಜಾಗದಲ್ಲಿ ಮೂರ್ತಿ ಮತ್ತೆ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದರೆ ಗಂಡಾಂತರ ಪಾರಾಗಲಿದೆ ಎಂದು ಮಹಿಳೆ ಹೇಳಿದ್ದಾಳಂತೆ. ಹೀಗಾಗಿ ಈಗ ಜನರು ಕಲ್ಲುಗಳನ್ನು ಇಟ್ಟು ಪೂಜೆ ಮಾಡಿ ದೇವಿಯ ಮೊರೆ ಹೋಗಿದ್ದಾರೆ. ಅದೇ ರೀತಿ ದೇವಸ್ಥಾನ ಇದ್ದ ಜಾಗದ ಮುಂಭಾಗದ ಮನೆಯಲ್ಲಿಯೇ ಇದ್ದ ವೃದ್ದೆ ನರಸಮ್ಮ ವಾಂತಿ ಭೇದಿಯಿಂದ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾಳೆ.
ಅದೇ ದಿನ ಸಾವಿತ್ರಮ್ಮ ನಾರಾಯಣಪೇಟೆ ಆಸ್ಪತ್ರೆ, ಮೆಹಬೂಬ್ನಗರದ ಆಸ್ಪತ್ರೆಯಲ್ಲಿ ಸಾಯಮ್ಮ ಮೃತಪಟ್ಟಿದ್ದಾರೆ. ಗ್ರಾಮಕ್ಕೆ ದೇವಿಯ ಶಾಪ ತಟ್ಟಿರುವ ಬಗ್ಗೆ ಗ್ರಾಮದ ಮುಖಂಡರು ಗ್ರಾಮದಲ್ಲಿ ಸಭೆ ನಡೆಸಿ, ಪರಿಹಾರ ಕಾಣಿಕೊಳ್ಳಲು ಚರ್ಚೆ ಮಾಡಿದ್ದಾರೆ. ಕರೆಪ್ಪತಾತಾ ಮಠದಿಂದ ಕರೆಮ್ಮ ದೇವಸ್ಥಾನವಿರುವ ಸ್ಥಳದವರೆಗೆ ಕರೆಮ್ಮ ಮೂರ್ತಿಗೆ ಪೂಜೆ ಮಾಡಿ, ಶ್ರದ್ಧಾ ಭಕ್ತಿಯಿಂದ ವಾದ್ಯ ಮೇಳದೊಂದಿಗೆ ಮೂರ್ತಿ ಮೆರವಣಿಗೆ ಮಾಡಿ, ಪ್ರತಿಷ್ಠಾಪನೆ ಮಾಡಲಾಗಿದೆ.
ಮೆರವಣಿಗೆಯಲ್ಲಿ ಗ್ರಾಮಸ್ಥರೆಲ್ಲರು ಭಾಗಿಯಾದರು. ಮೂರ್ತಿ ಪ್ರತಿಷ್ಟಾಪನೆ ಮಾಡಿ, ದೇವಿಯ ದರ್ಶನ ಜನರು ಪಡೆಯುತ್ತಿದ್ದಾರೆ. ಆದರೆ, ವೈಜ್ಞಾನಿಕ ವರದಿ ನೀರು ಕುಡಿಯಲು ಯೋಗ್ಯವಿಲ್ಲವೆಂಬುದು ಈಗಾಗಲೇ ಘಟನೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ : ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಗನ ದಾರುಣ ಸಾವು