ಯಾದಗಿರಿ: ಹೋಮ್ ಕ್ವಾರಂಟೈನ್ ವಿಧಿಸಿದ್ದರೂ ನಿಯಮ ಉಲ್ಲಂಘಿಸಿ ಹೊರಗೆ ಅಡ್ಡಾಡಿದ ಮೂವರ ವಿರುದ್ಧ ಯಾದಗಿರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರಿಗೆ ಹೋಮ್ ಕ್ವಾರಂಟೈನ್ಗೆ ಸೂಚಸಲಾಗಿತ್ತು. ಸರ್ಕಾರದ ಆದೇಶ ಪಾಲಿಸದೆ ಹೊರಗಡೆ ತಿರುಗಾಡಿದ ಜಿಲ್ಲೆಯ ಲಕ್ಷ್ಮಿ ನಗರ, ಏವೂರು ತಾಂಡಾ (ಬಿ) ಹಾಗೂ ಹೈಯ್ಯಾಳ (ಕೆ) ಗ್ರಾಮದ ವ್ಯಕ್ತಿಗಳ ವಿರುದ್ಧ ಮೂರು ಪ್ರಕರಣ ದಾಖಲಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದರು.
ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ನಿಗದಿತ ಅವಧಿ ಮುಕ್ತಾಯಗೊಂಡ ನಂತರ ತಪಾಸಣೆ ನಡೆಸಿ ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಗುತ್ತಿದೆ. ಸುರುಪುರ ತಾಲೂಕಿನ ಲಕ್ಷ್ಮಿ ನಗರ ಕೆಂಭಾವಿ ಮತ್ತು ಏವೂರು ತಾಂಡಾದಲ್ಲಿ (ಬಿ) ವಲಸಿಗರು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುವುದು ಕಂಡುಬಂದಿದೆ. ವಡಗೇರಾ ತಾಲೂಕಿನ ಹೈಯಾಳ (ಕೆ) ಗ್ರಾಮದಲ್ಲಿ ಕೂಡ ಇಂತಹದ ಪ್ರಕರಣ ಮರುಕಳಿಸಿದೆ. ಇವರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಲಾಗಿದೆ ಎಂದರು.
ಗೃಹ ದಿಗ್ಬಂಧನ ಅವಲೋಕನೆಗಾಗಿ ಇರುವ ತಮ್ಮ ಅವಧಿ ಮುಗಿಯುವವರೆಗೆ ಕಡ್ಡಾಯವಾಗಿ ಗೃಹ ದಿಗ್ಬಂಧನದಲ್ಲಿ ಇರತಕ್ಕದ್ದು. ಒಂದು ವೇಳೆ ಗೃಹ ದಿಗ್ಬಂಧನ ಬಿಟ್ಟು ಹೊರಗಡೆ ತಿರುಗಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅಂತವರನ್ನು ಮತ್ತೆ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.