ಯಾದಗಿರಿ: ಜಿಲ್ಲಾದ್ಯಂತ ಸುರಿದ ಅಕಾಲಿಕ ಮಳೆಗೆ ಸಾವಿರಾರು ಎಕರೆ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಶಹಾಪುರ ತಾಲೂಕಿನ ಸಾವೂರು, ಬೀರನೂರ, ಸಗರ ಕಾಟಮನಹಳ್ಳಿ, ಕೊಂಗಂಡಿ ಸೇರಿದಂತೆ ಹಲವು ಗ್ರಾಮದ ರೈತರಿಗೆ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ ಸಂಭವಿಸಿದೆ. ಭತ್ತದ ಬೆಳೆ ಹಾನಿ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಹಾನಿಯ ಕುರಿತು ಅಂದಾಜು ಪಟ್ಟಿ ತಯಾರಿಸಿ, ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲವು ಕಡೆ ರೈತರು ಭತ್ತದ ಕೊಯ್ಲು ನಡೆಸಲು ಕೂಡ ಹಿಂಜರಿಯುತ್ತಿದ್ದಾರೆ.
ಬೆಳೆ ಹಾನಿ ಪರಿಹಾರ: ಈ ಕುರಿತು ಈಟಿವಿ ಭಾರತದೊಂದಿಗೆ ಅಳಲು ತೋಡಿಕೊಂಡ ಸಗರ ಗ್ರಾಮದ ರೈತ ಅಮ್ರಪ್ಪನ, ಭತ್ತದ ಕಟಾವಿನ ಸಮಯದಲ್ಲೇ ಮಳೆ ಬಂದಿರುವುದರಿಂದ ಬೆಳೆಹಾನಿಯಾಗಿದೆ. ಭತ್ತ ಗದ್ದೆಯಲ್ಲೇ ಬಿದ್ದು ಮೊಳಕೆಯೊಡಿದಿದೆ. ಖರೀದಿದಾರರು ಕೂಡ ಒಣ ಭತ್ತವನ್ನು ಮಾತ್ರ ಸ್ವೀಕರಿಸುತ್ತಿದ್ದು, ಕೃಷಿಕರ ಪಾಡು ಚಿಂತಾಜನಕವಾಗಿದೆ ಎಂದರು.
Crop Loss Survey: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಿಂದಾಗಿ ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಹಾನಿಯಾಗಿರಬಹುದೆಂದು ಸಮೀಕ್ಷೆ ನಡೆಯುತ್ತಿದೆ. ಇನ್ನೂ ಒಂದೆರಡು ದಿನದಲ್ಲಿ ಎಷ್ಟು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂಬುದು ನಿಖರವಾಗಿ ತಿಳಿಯಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ತಿಳಿಸಿದರು.