ಸುರಪುರ (ಯಾದಗಿರಿ): ನಗರದಲ್ಲಿ ಕಳೆದ ಐದು ವರ್ಷಗಳಿಂದ ಅನಾಥವಾಗಿ ಬೀದಿಯಲ್ಲಿ ಕಾಲ ಕಳೆಯುತ್ತಿದ್ದ ವಯೋವೃದ್ಧೆ ಮಹಿಳೆಗೆ ಆಶ್ರಯ ಒದಗಿಸುವಲ್ಲಿ ಈಟಿವಿ ಭಾರತ ವರದಿ ನೆರವಾಗಿದೆ. ವೃದ್ಧೆಗೆ ಆಶ್ರಯ ಕಲ್ಪಿಸಿದ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಸುರಪುರ ನಗರದ ಬಸ್ ನಿಲ್ದಾಣ, ಸರ್ಕಾರಿ ನೌಕರರ ಭವನ, ತಹಶೀಲ್ದಾರ್ ರಸ್ತೆ, ಸರ್ದಾರ್ ವಲ್ಲಭಾಯ್ ಪಟೇಲ್ ವೃತ್ತ ಹೀಗೆ ಎಲ್ಲೆಂದರಲ್ಲಿ ಅಲೆದಾಡಿ ಕಳೆದ ಕೆಲ ವರ್ಷಗಳಿಂದ ಈ ಮಹಿಳೆ ಅನಾಥವಾಗಿ ಕಾಲ ಕಳೆಯುತ್ತಿದ್ದಳು. ಇತ್ತೀಚೆಗೆ ತೀರಾ ನಿತ್ರಾಣಗೊಂಡು ತಾನಿದ್ದಲ್ಲೇ ಮಲ-ಮೂತ್ರ ಮಾಡಿ, ಅದರಲ್ಲಿಯೇ ನರಳುತ್ತಿದ್ದಳು. ಮಹಿಳೆಯ ದಯನೀಯ ಪರಿಸ್ಥಿತಿ ಬಗ್ಗೆ ಜುಲೈ 10ರಂದು ಈಟಿವಿ ಭಾರತ ವರದಿ ಮಾಡಿತ್ತು.
ಈ ವರದಿಯನ್ನು ಗಮನಿಸಿದ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮಹಿಳೆಗೆ ಆಶ್ರಯ ಕಲ್ಪಿಸಲು ಯೋಚಿಸಿದರು. ಕಲಬುರಗಿಯಲ್ಲಿನ ವೃದ್ಧಾಶ್ರಮ ಹಾಗೂ ಯಾದಗಿರಿಯಲ್ಲಿನ ಅನಾಥಾಶ್ರಮ ಮತ್ತಿತರೆಡೆಗಳಲ್ಲಿ ವಿಚಾರಿಸಿ, ಕೊನೆಗೆ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಯವರನ್ನು ಸಂಪರ್ಕಿಸಿ ಆಶ್ರಯ ಕಲ್ಪಿಸಲು ಕೋರಿದ್ದರು.
ಇದನ್ನೂ ಓದಿ: ಕುಟುಂಬದವರ ಕ್ರೂರತೆಗೆ ಮೂರು ವರ್ಷಗಳಿಂದ ಬೀದಿಯಲ್ಲಿ ನರಳುತ್ತಿದೆ ವೃದ್ಧ ಜೀವ
ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಸಲಹೆಗೆ ಸ್ಪಂದಿಸಿರುವ ಸಿಡಿಪಿಒ ಲಾಲ್‌ಸಾಬ್ ಅವರು ವಯೋವೃದ್ಧೆಯನ್ನು ಹುಣಸಗಿಯಲ್ಲಿನ ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾಗಿದ್ದಾರೆ. ಬುಧವಾರ ಮಧ್ಯಾಹ್ನ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಮ್.ಪಾಟೀಲ್ ಇಲ್ಲಿಯವರೆಗೆ ದಿನಾಲು ರಾತ್ರಿ ಮಹಿಳೆಗೆ ಊಟ ಮತ್ತು ನೀರು ನೀಡುತ್ತಿದ್ದರು. ಪೊಲೀಸ್ ಪೇದೆ ದಯಾನಂದ ಮೂಲಕ ಮಹಿಳೆಯ ಕೊರೊನಾ ಪರೀಕ್ಷೆ ಮಾಡಿಸುವ ಜೊತೆಗೆ ಹುಣಸಗಿಯಲ್ಲಿನ ವೃದ್ಧಾಶ್ರಮಕ್ಕೆ ಬಿಡಲಾಯಿತು.
ಅನಾಥ ವಯೋವೃದ್ಧ ಮಹಿಳೆಗೆ ಆಶ್ರಯ ಕಲ್ಪಿಸಲು ಮುಂದಾದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಮ್.ಪಾಟೀಲ್, ಸಿಡಿಪಿಒ ಲಾಲ್‌ಸಾಬ್ ಅವರಿಗೆ ಈಟಿವಿ ಭಾರತ ಅಭಿನಂದನೆ ಸಲ್ಲಿಸುತ್ತದೆ.