ಯಾದಗಿರಿ: ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಕ್ಷದ ಮುಖಂಡರು, ಸಾರ್ವಜನಿಕರು ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭ, ಮೆರವಣಿಗೆ ಇತರೆ ಕಾರ್ಯಕ್ರಮಗಳಿಗೆ ಅನುಮತಿ ಪಡೆಕೊಳ್ಳಬೇಕು. ಹಾಗೂ ಚುನಾವಣೆಯಲ್ಲಿ ಕಾರ್ಯನಿರತ ಅಧಿಕಾರಿ ಮತ್ತು ನೌಕರರು ಯಾವುದೇ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಕ್ಷಿಪ್ರ ಸಂಚಾರಿ ದಳ, ವಿಡಿಯೋ ಕಣ್ಗಾವಲು ತಂಡ, ಸೆಕ್ಟರ್ ಅಧಿಕಾರಿಗಳು ಮತ್ತು ಅಧಿಕಾರಿಗಳ ವಿವಿಧ ತಂಡಗಳ ತರಬೇತಿ ಉದ್ದೇಶಿಸಿ ಡಿಸಿ ಮಾತನಾಡಿದರು. ಈಗಾಗಲೇ ನೇಮಕ ಮಾಡಿರುವ ಅಧಿಕಾರಿಗಳ ತಂಡಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಿ ಹಾಗೂ ಮತಗಟ್ಟೆಗಳಲ್ಲಿ ಮತದಾನದ ದಿನ ಥರ್ಮಲ್ ಸ್ಕ್ರೀನಿಂಗ್, ಸಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಒಟ್ಟು 7 ಮತಗಟ್ಟೆಗಳಿವೆ. 1,970 ಶಿಕ್ಷಕ ಮತದಾರರು ಇದ್ದು, ಯಾದಗಿರಿ ತಾಲೂಕಿನಲ್ಲಿ 431, ಗುರುಮಠಕಲ್ ತಾಲೂಕಿನಲ್ಲಿ 165, ಶಹಾಪುರದಲ್ಲಿ 710, ಸುರಪುರದಲ್ಲಿ 404, ಹುಣಸಗಿಯಲ್ಲಿ 79, ಕೆಂಭಾವಿಯಲ್ಲಿ 111, ಕೋಡೆಕಲ್‍ನಲ್ಲಿ 70 ಮತದಾರರು ಇದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಮತದಾನ ಅಕ್ಟೋಬರ್ 28ರಂದು ನಿಗದಿಯಾಗಿರುವುದರಿಂದ ಮತದಾನ ಪ್ರಾರಂಭವಾಗುವುದಕ್ಕಿಂತ 48 ಗಂಟೆಗಳ ಮುಂಚೆ ಅಂದರೆ ಅಕ್ಟೋಬರ್ 26ರ ಸಾಯಂಕಾಲ 6 ಗಂಟೆಯಿಂದ ಬಹಿರಂಗ ಪ್ರಚಾರ ಮಾಡುವುದು ಕೊನೆಗೊಳ್ಳುತ್ತದೆ. ಎಲ್ಲಾ ಅಂಶಗಳ ಉಲ್ಲಂಘನೆಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951ರ ಪ್ರಕರಣ 126 ಹಾಗೂ ಭಾರತೀಯ ದಂಡ ಸಂಹಿತೆಯ ಪ್ರಕರಣ 171ರಡಿ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದರು. ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಮತ್ತು ಕುಂದು ಕೊರತೆಗಳನ್ನು ಸಾರ್ವಜನಿಕರು ಸಲ್ಲಿಸಲು ಸಹಾಯಕ ಚುನಾವಣಾಧಿಕಾರಿ ಕಚೇರಿ ಯಾದಗಿರಿಯಲ್ಲಿ 24*7 ಸಹಾಯವಾಣಿ ಸ್ಥಾಪಿಸಲಾಗಿದ್ದು, ದಿನದ 24 ಗಂಟೆ ಕಾರ್ಯನಿರ್ವಹಣೆಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣಾ ಶಾಖೆ ಕೊಠಡಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ದೂ. 08473-253705 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಹಾಗೂ ಕುಂದು ಕೊರತೆಗಳನ್ನು ದಾಖಲಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಮತ್ತು ಸುರಕ್ಷತೆಯ ಉಪ ನಿರ್ದೇಶಕರಾದ ಡಾ. ಪುಣ್ಯಕೋಟೆ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದ್ದು, ಅವರ ಮೊ.8310632137ಗೂ ಸಹ ಸಂಪರ್ಕಿಸಬಹುದು ಎಂದು ಹೇಳಿದರು.