ಸುರಪುರ : ಜನರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಶಾಸಕ ನರಸಿಂಹ ನಾಯಕ (ರಾಜುಗೌಡ) ಮುಂದಾಗಿದ್ದಾರೆ. ಸ್ವತಃ ತಾವೇ ಸುರಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಸ್ವಯಂ ಪ್ರೇರಿತರಾಗಿ ಗಂಟಲು ದ್ರವ ಮತ್ತು ಮೂಗಿನ ದ್ರವ ಮಾದರಿಯನ್ನ ಪರೀಕ್ಷೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕೋವಿಡ್-19 ಬಿಕ್ಕಟ್ಟು ದಿನೇದಿನೆ ವಿಷಮಿಸುತ್ತಿದೆ. ವೈರಸ್ ವಿರುದ್ಧದ ಸಮರದಲ್ಲಿ ನಮ್ಮ-ನಿಮ್ಮಪಾತ್ರ ದೊಡ್ಡದಿದೆ. ನನ್ನ ಕ್ಷೇತ್ರ, ಜಿಲ್ಲೆ ಸೇರಿದಂತೆ ಹಲವೆಡೆ ಹೋಗಿ ಬಂದಿದ್ದೇನೆ. ನಾನು ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಜನರಿಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.
ಕೊರಾನಾ ಹೆಚ್ಚಾಗುತ್ತಿದೆ. ಅದನ್ನು ಹೋಗಲಾಡಿಸಲು ಹಾಗೂ ನಮ್ಮ ರಕ್ಷಣೆ ಮಾಡಿಕೊಳ್ಳಲು ಎಲ್ಲರೂ ಮುಂದಾಗಬೇಕಿರುವುದು ಅತ್ಯವಶ್ಯಕ. ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ನಮ್ಮ ಪಾತ್ರವೂ ಇದೆ. ಅನಗತ್ಯ ಓಡಾಡಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಜ್ವರ, ಕೆಮ್ಮು ಕಂಡು ಬಂದ್ರೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೈದ್ಯರು, ನಗರಸಭೆ, ಪೊಲೀಸರು, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿ ತಮ್ಮ ಹಾಗೂ ಕುಟುಂಬ ರಕ್ಷಣೆ ಮರೆತು ಕೊರೊನಾ ವಿರುದ್ಧ ಹಗಲಿರುಳು ಹೋರಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.