ಸುರಪುರ (ಯಾದಗಿರಿ): ಇಂಧನ ಖಾತೆಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮಾತನಾಡುವ ಸಚಿವ ಸಿ.ಪಿ ಯೊಗೇಶ್ವರ್ ಬಹಿರಂಗ ಚರ್ಚೆಗೆ ಬರುವಂತೆ ಶಾಸಕ ರಾಜುಗೌಡ ಸವಾಲ್ ಹಾಕಿದ್ದಾರೆ.
ಸುರಪುರದ ಎಪಿಎಂಸಿ ಕಾರ್ಯಾಲಯದಲ್ಲಿ ಹಮಾಲರಿಗೆ ಲಸಿಕೆ ವಿತರಣಾ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಂಚೆ ಸಿ.ಪಿ ಯೋಗೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳದಂತೆ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೆವು. ಆದರೆ, ಅಂದು ನಮ್ಮ ಮಾತು ಕೇಳದ ಮುಖ್ಯಮಂತ್ರಿಗಳು ಈಗ ಅನುಭವಿಸುತ್ತಿದ್ದಾರೆ ಎಂದರು.
ಹಿಂದೆ ರಾಮನಗರ ಚುನಾವಣೆ ಸಂದರ್ಭದಲ್ಲಿ ಅಕ್ಕ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಅಭ್ಯರ್ಥಿ ಹಾಕಿ ನಂತರ ಯಾಕೆ ವಾಪಸು ಪಡೆದರು ಎನ್ನುವುದು ಬಹಿರಂಗಪಡಿಸಲಿ. ಮೊನ್ನೆ ನಡೆದ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಹೇಳಲಿ.
ಅದು ಬಿಟ್ಟು ತಮಗೆ ಇಂಧನ ಖಾತೆ ಬೇಕಾಗಿದ್ದು, ಅದಕ್ಕಾಗಿ ಯಡಿಯೂರಪ್ಪ ವಿರುದ್ಧ ಮಾತನಾಡುವ ಬದಲು ತಾನು ಏನು ಮಾಡಿದ್ದಾನೆ ಅನ್ನುವುದರ ಬಗ್ಗೆ ಮಾಧ್ಯಮದ ಮುಂದೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು.