ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ನೀಡಲು ಸಿಎಂ ಗೆ ಮನವಿ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಬಿಎಸ್ವೈ ಅವರ ಮೇಲೆ ಒತ್ತಡ ಇರುವುದು ಸಹ ಅರಿವಿದೆ. ಹೀಗಾಗಿ ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಿದ ಬಳಿಕ ಕಲ್ಯಾಣ ಕರ್ನಾಟಕಕ್ಕೂ ಕೂಡ ಅಭಿವೃದ್ಧಿ ವಿಚಾರವಾಗಿ ಆದ್ಯತೆ ನೀಡಿ ಅಂತ ಒತ್ತಾಯಿಸಬೇಕಿದೆ ಎಂದು ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್ವೈ ಯಾರಿಗೆ ಭರವಸೆ ಕೊಟ್ಟಿದ್ದಾರೋ ಅವರಿಗೆ ಸಚಿವಸ್ಥಾನ ನೀಡಲಿ. ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಂದ ನಮ್ಮ ಸರ್ಕಾರ ಸುಭದ್ರವಾಗಿದೆ. ಹೀಗಾಗಿ ಅವರಿಗೆ ಕೊಟ್ಟು ಉಳಿದ ಸಚಿವ ಸ್ಥಾನದಲ್ಲಿ ಹೈದ್ರಾಬಾದ್ ಕರ್ನಾಟಕಕ್ಕೆ ಆದ್ಯತೆ ನೀಡಲಿ ಅನ್ನೋದು ನಮ್ಮ ಬೇಡಿಕೆಯಾಗಿದೆ. ನಮ್ಮದು ಒಂಥರ ಸಮ್ಮಿಶ್ರ ಸರ್ಕಾರದಂತೆ ಇದ್ದು, ಇದರಲ್ಲೇ ಉಳಿದ ಸಚಿವ ಸ್ಥಾನವನ್ನು ನಮಗೂ ಕೊಡಿ. ಈ ಭಾಗದ ಶಾಸಕರು, ಸಂಸದರು ಸಹ ನಮ್ಮನ್ನ ಸಚಿವರನ್ನಾಗಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದರು.
ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಹೆಚ್ಚಳ ವಿಚಾರವಾಗಿ ಮಾತನಾಡಿದ ಶಾಸಕರು, ನಮ್ಮ ಸಮಾಜದ ಗುರುಗಳಾದ ಪ್ರಸನ್ನಾನಂದ ಪುರಿ ಶ್ರೀಗಳು ಆದೇಶ ನೀಡಿದರೆ ರಾಜೀನಾಮೆ ನೀಡಲು ಸಿದ್ಧನಾಗಿದ್ದೇನೆ. ಸಮಾಜದ ಬೇಡಿಕೆಯನ್ನ ಸಿಎಂ ಯಡಿಯೂರಪ್ಪ ಈಡೇರಿಸಲಿದ್ದಾರೆ. ಸರ್ಕಾರದ ಮನವೊಲಿಸಲು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಇನ್ನು, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬೆಳವಣಿಗೆ ಸಹಿಸಲಾರದಿರುವವರು ವಿರೋಧ ಮಾಡುತ್ತಿದ್ದಾರೆ. ಮಂಗಳೂರಿಗಿಂತ ಹೆಚ್ಚು ಮುಸ್ಲಿಮರು ಕಲಬುರಗಿಯಲ್ಲಿದ್ದಾರೆ. ಇಲ್ಲಿ ಶಾಂತಿಯುತವಾಗಿಯೇ ಪ್ರತಿಭಟನೆ ನಡೆದಿದೆ. ಆದರೆ ಮಂಗಳೂರಲ್ಲಿ ಉದ್ದೇಶಪೂರ್ವಕವಾಗಿ ಗಲಾಟೆ ನಡೆಸಲಾಗಿದೆ. ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಈ ರೀತಿಯ ಪ್ರತಿಭಟನೆ ಮಾಡಬಾರದು ಎಂದು ರಾಜುಗೌಡ ಕಿಡಿಕಾರಿದರು.