ಯಾದಗಿರಿ: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆಗೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಮಹಿಳಾ ಸಶಕ್ತೀಕರಣ ಮತ್ತು ಸಬಲೀಕರಣಕ್ಕೆ ನೆರವಾಗಿದೆ ಎಂದರು.
ಇಂದಿನಿಂದ ರಾಜ್ಯದಲ್ಲಿ ಹಾಗೂ ರಾಜ್ಯದ ಗಡಿಯ ಪಟ್ಟಣ ಹಾಗೂ ಗ್ರಾಮಗಳವರೆಗೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲಿದ್ದು, ಇದಕ್ಕೆ ಇಂದು ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು ಏಳು ಲಕ್ಷ ಮಹಿಳೆಯರಿದ್ದು, ಈವರೆಗೆ ಕಡಿಮೆ ಪ್ರಮಾಣದಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಯೋಜನೆ ಜಾರಿಯಿಂದ ಎಲ್ಲ ಮಹಿಳೆಯರು ಹೆಚ್ಚಿನ ಲಾಭ ಪಡೆಯಬಹುದಾಗಿದ್ದು, ಸರ್ಕಾರ ಮಹಿಳೆಯರ ಆರ್ಥಿಕ ಭಾರ ಇಳಿಸುವ ಮಹತ್ವದ ಕಾರ್ಯ ಮಾಡಿದೆ ಎಂದು ಹೇಳಿದರು.
ಮುಂದಿನ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಪಡೆದು ಸರ್ಕಾರಿ ಬಸ್‌ಗಳಲ್ಲಿ ಸಂಚಾರ ಮಾಡಬೇಕು. ಈ ಅವಧಿಯಲ್ಲಿ ಸದ್ಯ ಗುರುತಿಗಾಗಿ ಆಧಾರ್ ಕಾರ್ಡ್, ಮತದಾನ ಗುರುತಿನ ಚೀಟಿ, ಚಾಲನ ಪರವಾನಿಗೆ ಪತ್ರ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡೆದ ಯಾವುದಾದರೂ ಭಾವಚಿತ್ರವುಳ್ಳ ಗುರುತಿನ ಚೀಟಿ ತೋರಿಸುವ ಮೂಲಕ ಪ್ರಯಾಣದ ಶೂನ್ಯ ಟಿಕೆಟ್ ಪಡೆದು ರಾಜ್ಯ ಮತ್ತು ರಾಜ್ಯದ ಗಡಿಯವರೆಗೆ ಬಸ್ ಸಂಚಾರ ಮಾಡಬಹುದಾಗಿದ್ದು, ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಈ ವೇಳೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮತ್ತು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಉಪಸ್ಥಿತರಿದ್ದರು.
ಪ್ರಯಾಣಿಕರಾದ ಶಾಂತ ಬಾಯಿ ಚಿಕ್ಕಮಠ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟಿದ್ದರಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ತುಂಬಾ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಯಾಣಿಕರಾದ ಅಶ್ವಿನಿ ಶಿವಾನಂದ ಸಗರ ಮಾತನಾಡಿ, ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ಬಡವರಿಗೆ, ವಿದ್ಯಾರ್ಥಿನಿಯರು ಹಾಗೂ ದೂರದ ಊರಿಗೆ ಹೋಗುವವರಿಗೆ ತುಂಬಾ ಅನುಕೂಲವಾಗಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು ಎಂದರು.
ಇದನ್ನೂ ಓದಿ:Free bus: ದಾವಣಗೆರೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್
ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ: ರಾಜ್ಯದ ಎಲ್ಲ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ 'ಶಕ್ತಿ ಯೋಜನೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದ್ದಾರೆ. ವಿಧಾನಸೌಧ ಮುಂಭಾಗ ಯೋಜನೆಯ ಉದ್ಘಾಟನಾ ಸಮಾರಂಭ ನಡೆಯಿತು. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಜಾರಿಯಾಗಿರುವ ಮೊದಲ ಯೋಜನೆ ಇದಾಗಿದೆ. ರಾಜ್ಯಾದ್ಯಂತ ಏಕಕಾಲಕ್ಕೆ ಶಕ್ತಿ ಯೋಜನೆ ಉದ್ಘಾಟನೆಗೊಂಡಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು ಚಾಲನೆ ನೀಡಿದ್ದಾರೆ.