ಸುರಪುರ (ಯಾದಗಿರಿ): ಹೆಚ್. ವಿಶ್ವನಾಥಗಾಗಿ ಯಾವು ತ್ಯಾಗಕ್ಕೂ ಸಿದ್ಧವೆಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡರ ಮನೆಗೆ ಭೇಟಿ ನೀಡಿದ್ದ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವರು, ಹೆಚ್.ವಿಶ್ವನಾಥ ಅವರ ರಾಜಕೀಯ ಭವಿಷ್ಯ ಮುಂದೆ ಉಜ್ವಲವಾಗಲಿದೆ. ಅವರಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ. ನಾನು ಸದಾ ಅವರ ಬೆಂಬಲಕ್ಕೆ ನಿಂತಿರುತ್ತೇನೆ. ಮುಂದೆ ಹೆಚ್.ವಿಶ್ವನಾಥ ವಿಧಾನ ಪರಿಷತ್ ಸದಸ್ಯರಾಗುವುದು ಖಚಿತ ಎಂದು ಭವಿಷ್ಯ ನುಡಿದರು.
ಸುರಪುರ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕಾಮಗಾರಿ ಸ್ಥಳವನ್ನು ಗುರುತಿಸಲಾಗಿದ್ದು, ಅಂದಾಜು 300 ಕೋಟಿ ರೂಪಾಯಿಗಳ ಕಾಮಗಾರಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ ಈ ತಾಲೂಕಿನಲ್ಲಿನ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲವೆಂಬುದು ಗಮನಕ್ಕೆ ಬಂದಿದೆ. ಕೊನೆ ಭಾಗದ ರೈತರಿಗೂ ನೀರು ತಲುಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೊದಲಬಾರಿಗೆ ಆಗಮಿಸಿದ ಸಚಿವರಿಗೆ ಶಾಸಕ ರಾಜುಗೌಡ ಮತ್ತವರ ಬೆಂಬಲಿಗರು ಸನ್ಮಾನಿಸಿ ಬೆಳ್ಳಿ ಗದೆ ನೀಡಿ ಗೌರವಿಸಿದರು.
ಈ ವೇಳೆ ಸಚಿವರು ಸೇರಿದಂತೆ ಸ್ಥಳದಲ್ಲಿದ್ದ ಉಪಸ್ಥಿತರಿದ್ದ ಕೆಲವರು ಮಾಸ್ಕ್ ಧರಿಸದೆ ಕೊರೊನಾ ನಿಯಮಗಳನ್ನು ನಿರ್ಲಕ್ಷಿಸಿದ ಘಟನೆ ನಡೆಯಿತು.