ಯಾದಗಿರಿ: ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಇಂದು ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಶಿವನೂರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸಂತ್ರಸ್ತರು ತಮ್ಮ ಗ್ರಾಮ ಸ್ಥಳಾಂತರ ಮಾಡಬೇಕು ಅಂತ ಸಚಿವರಲ್ಲಿ ಮನವಿ ಮಾಡಿಕೊಂಡರು. ಅತಿ ಹಾನಿಯಾದ ಗ್ರಾಮಗಳ ಪಟ್ಟಿ ಸಿದ್ದಪಡಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾಪ ಸಲ್ಲಿಸುವ ಮೂಲಕ ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮಗಳನ್ನ ಬೇರೆಡೆ ಸ್ಥಳಾಂತರಿಸುವ ಮೂಲಕ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ಸಹಾಯಕ ಆಯುಕ್ತರಿಗೆ ಶೀಘ್ರವಾಗಿ 10 ಸಾವಿರ ಹಣ ಸಂತ್ರಸ್ತರ ಖಾತೆಗೆ ಜಮಾ ಮಾಡುವಂತೆ ಸೂಚಿಸಿದರು. ನಂತರ ಪ್ರವಾಹದಿಂದ ಹಾನಿಯಾದ ಜೋಳದಡಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಗೆ ಭೇಟಿ ನೀಡಿ ಹಾನಿ ಕುರಿತು ವೀಕ್ಷಿಸಿ ಆದಷ್ಟು ಬೇಗನೆ ಬ್ರಿಡ್ಜ್ ನ ಸೂಕ್ತ ನಿರ್ವಹಣೆ ಮಾಡುವದರ ಜೋತೆಗೆ ಸಂಪರ್ಕ ರಸ್ತೆ ದುರಸ್ತಿಗೊಳಿಸುವಂತೆ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಹೇಳಿದರು.
ಬೆಂಡೆಬೆಂಬಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ ಯಾವುದೇ ಕಾರಣಕ್ಕೂ ನಮ್ಮ ಗ್ರಾಮವನ್ನ ಸ್ಥಳಾಂತರಿಸುವ ವರೆಗೆ ನಮ್ಮ ಗ್ರಾಮಕ್ಕೆ ತೆರಳುವದಿಲ್ಲ ಅಂತ ಹಠ ಹಿಡಿದು ಕುಳಿತಂತಾ ಶಿವನೂರ ಗ್ರಾಮಸ್ಥರ ಸಮಸ್ಯೆ ಆಲಿಸಿದರು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಪ್ರವಾಹದಿಂದ ನೆರೆ ಸಂತ್ರಸ್ತರಿಗಾದ ಹಾನಿ ಕುರಿತು ಪರಿವೀಕ್ಷಣೆ ಮಾಡಲು ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಯಾದಗಿರಿಗೆ ಇಲ್ಲಿಯವರೆಗೆ ಭೇಟಿ ನೀಡಿಲ್ಲ ಅನ್ನೋ ಜನರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ನನಗೆ ಕೊರೊನಾ ಧೃಡ ಪಟ್ಟಿದ್ದರಿಂದ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲು ವಿಳಂಬವಾಗಿದೆ. ಸಂತ್ರಸ್ತರಿಗೆ ಸರ್ಕಾರದಿಂದ ಶೀಘ್ರವಾಗಿ 10 ಸಾವಿರ ಹಣ ಬಿಡುಗಡೆ ಮಾಡಲಾಗುವುದು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಆಗಿರುವ ಹಾನಿ ಕುರಿತು ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.