ಯಾದಗಿರಿ: ಉದ್ಯೋಗ ಇಲ್ಲದವರು ಏನಾದರು ಮಾಡಬೇಕಲ್ಲ. ಕಾಂಗ್ರೆಸ್ನವರಿಗೆ ಯಾವುದೇ ಉದ್ಯೋಗ ಇಲ್ಲ, ಹಾಗಾಗಿ ಪಾದಯಾತ್ರೆ ಅಂತ ಹೊರಟಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ನಗರಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಮೇಕೆದಾಟು ಮಾಡಬೇಡಿ ಅಂತ ಯಾರು ಹೇಳಿದ್ರು. ಈಗ ಮೇಕೆದಾಟು ಒಂದು, ಎರಡು ಅಂತ ಹೊರಟಿದ್ದಾರೆ. ಕಾಂಗ್ರೆಸ್‌ನವರು ಪಾದಯಾತ್ರೆಯಿಂದ ಅಧಿಕಾರದ ಕನಸು ಕಾಣ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎಂದೆಂದಿಗೂ ಅಧಿಕಾರಕ್ಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವೀರಶೈವ-ಲಿಂಗಾಯತ ಅಂತ ಒಡೆದರು, ಜಾತಿ-ಧರ್ಮ ಒಡೆದ ಮೇಲೆ ಜನ ಒಪ್ಪಲ್ಲ. ಹಾಗಾಗಿ ಸಿದ್ದರಾಮಯ್ಯ ಎಲ್ಲಾ ಸ್ಥಾಗಳನ್ನು ಕಳೆದುಕೊಂಡರು. ಕೇಸರಿ ಪೇಟ ಅಂದ್ರೆ ಸಿದ್ದರಾಮಯ್ಯಗೆ ಅಲರ್ಜಿ, ಮುಸಲ್ಮಾನರ ಪೇಟ ಅಂದ್ರೆ ಬಹಳ ಖುಷಿ ಎಂದು ಮಾತಿನಲ್ಲಿ ತಿವಿದರು.
ಹಿಂದೂ-ಮುಸಲ್ಮಾನರನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮುಸಲ್ಮಾನರ ವೋಲೈಕೆಗಾಗಿ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಬೇರೆ ಬೇರೆ ಪಕ್ಷಕ್ಕೆ ಹೋಗಿ ಬಂದವರು. ಸಿದ್ದು ಸಿಎಂ ಅಭ್ಯರ್ಥಿ ಅಲ್ಲ ಎಂದು ಹೇಳಿದರೆ ಕಾಂಗ್ರೆಸ್ ಬಿಡುತ್ತಾರೆ. ಪಕ್ಷಕ್ಕಾಗಿ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿಲ್ಲ, ಅಧಿಕಾರಕ್ಕಾಗಿ ಮಾತ್ರ ಇರೋದು ಎಂದು ಟೀಕಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರೂ ಅತ್ತೆ-ಸೊಸೆ ಇದ್ದಂತೆ. ಅತ್ತೆ, ಸೊಸೆಯಾದವರು ತಾಯಿ, ಮಗಳಂತೆ ಇರಬೇಕು. ಅತ್ತೆ ಸಾಯಿಲಿ ಎಂದು ಸೊಸೆ ಕಾಯುತ್ತಿದ್ದಾರೆ. ಸೊಸೆ ಯಾವಾಗ ಊರಿಗೆ ಹೋಗ್ತಾಳೆ ಎಂದು ಅತ್ತೆ ಕಾಯ್ತಿರ್ತಾಳೆ. ಆ ರೀತಿ ಅವರ ಸಂಬಂಧ ಇದೆ ಎಂದು ಅತ್ತೆ-ಸೊಸೆ ಸಂಬಂಧಕ್ಕೆ ಹೋಲಿಸಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರು ಧರಣಿ ಕುಳಿತು ಇಡೀ ಅಧಿವೇಶನ ಹಾಳು ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಏನು ಮಾತಾಡಿದ್ದಾರೆ ಮತ್ತು ನಾನು ಏನು ಮಾಡಿದ್ದೇನೆ ಎಂಬುದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ತಮ್ಮ ಮಾತುಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ : ಗಡಿಗೆ ಬಂದು ಗಂಟೆಗಳಾದ್ರೂ ಕೇಳೋರಿಲ್ಲ ಸಂಕಷ್ಟ