ಗುರುಮಠಕಲ್(ಯಾದಗಿರಿ): ತಾಲೂಕಿನ ಮಿನಾಸಪೂರ ಗ್ರಾಮದ ರಸ್ತೆಗಳು ಎಷ್ಟರ ಮಟ್ಟಿಗೆ ಹದಗೆಟ್ಟಿವೆ ಎಂದರೆ ಅಲ್ಪ ಪ್ರಮಾಣದ ಮಳೆ ಬಂದರೂ ರಸ್ತೆ ಕೆರೆಯಾಗಿ ಮಾರ್ಪಾಡಾಗುತ್ತೆ. ವಾಹನ ಸಂಚಾರಕ್ಕಿಂತಲೂ ಜನರು ನಡೆದಾಡಲೂ ಯೋಗ್ಯವಿಲ್ಲದಂತಾಗುತ್ತದೆ. ಅತ್ತ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಮಿನಾಸಪೂರ ಗ್ರಾಮವು ಗುರುಮಠಕಲ್ ತಾಲೂಕಿನ ಗಡಿ ಗ್ರಾಮವಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಗ್ರಾಮದಲ್ಲಿ ಮಳೆ ಬಂತೆಂದರೆ ಸಾಕು ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತಿವೆ. ಮಕ್ಕಳು ಹಾಗೂ ವೃದ್ಧರು ಗ್ರಾಮದಲ್ಲಿ ಸಂಚರಿಸದ ಸ್ಥಿತಿ ಉಂಟಾಗುತ್ತದೆ. ಹಲವು ಕಡೆ ಚರಂಡಿ ನಿರ್ಮಾಣ ಮಾಡಲಾಗಿದ್ದರೂ ಅವುಗಳ ಹೂಳು ತೆಗೆಯದ ಕಾರಣ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿಗೆ ಸರ್ಕಾರದ ನಾನಾ ಯೋಜನೆಗಳ ಅನುದಾನ ದೊರೆತರೂ ಚರಂಡಿ ನಿರ್ಮಾಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಗ್ರಾಮದಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದ ಜನರು ಬಳಲುತ್ತಿದ್ದರೂ ಸಹ ಸ್ಥಳೀಯ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಬಾಯ್ತೆರೆದ ರಸ್ತೆಗುಂಡಿಗಳಿಗೆ ಸಿಲುಕಿ ವಾಹನ ಸವಾರರು, ಸ್ಥಳೀಯರು ಬೇಸತ್ತಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.