ಯಾದಗಿರಿ: ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಸಿಲುಕಿರುವ ಜಿಲ್ಲೆಯ ವಲಸೆ ಕೂಲಿ ಕಾರ್ಮಿಕರನ್ನು ಕರೆ ತರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಅನುಮತಿ ಪಡೆಯಲಾಗಿದೆ ಎಂದು ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಛೇರಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ಈ ಕುರಿತು ಚರ್ಚಿಸಲಾಗಿದ್ದು, ಗೋವಾ ಹಾಗೂ ಬೆಳಗಾವಿಯ ಗಡಿಭಾಗದ ಮಹಾರಾಷ್ಟ್ರದಲ್ಲಿ ಸಿಲುಕಿರುವ ಜಿಲ್ಲೆಯ ಕೂಲಿ ಕಾರ್ಮಿಕರನ್ನ ಕರೆಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿಯ 3 ಚೆಕ್ ಪೋಸ್ಟ್ ಮೂಲಕ ಕಾರ್ಮಿಕರನ್ನ ಕರೆ ತರಲು ಜಿಲ್ಲಾಡಳಿತದಿಂದ ಪ್ರತಿ ಚೆಕ್ ಪೋಸ್ಟ್ಗೆ 10 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನೆರೆಡು ಚೆಕ್ ಪೋಸ್ಟ್ಗಳ ಮೂಲಕ ಮಹಾರಾಷ್ಟ್ರದಲ್ಲಿ ಸಿಲುಕಿರುವ ಕಾರ್ಮಿಕರನ್ನ ಉಚಿತವಾಗಿ ವಾಪಸ್ ಕರೆ ತರಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅಲ್ಲದೇ ವಾಪಸ್ ಆದ ಎಲ್ಲಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುವದು. ಗೋವಾ ಸಂಪೂರ್ಣ ಗ್ರೀನ್ ಝೋನ್ನಲ್ಲಿರುವುದರಿಂದ ಇಲ್ಲಿಂದ ವಾಪಸ್ ಆಗುವ ಕಾರ್ಮಿಕರನ್ನ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುತ್ತದೆ. ಮಹಾರಾಷ್ಟ್ರ ಸಂಪೂರ್ಣ ರೆಡ್ ಝೋನ್ನಲ್ಲಿರುವುದರಿಂದ ಅಲ್ಲಿಂದ ಬಂದ ಕಾರ್ಮಿಕರನ್ನ ಸರ್ಕಾರಿ ಹಾಸ್ಟೆಲ್ ಅಥವಾ ಶಾಲೆಗಳಲ್ಲಿ 14 ದಿನ ಕ್ವಾರಂಟೈನ್ ಮಾಡಿ ಅವರ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದರು.
ಇನ್ನು ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಸಮ್ಮತಿ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ರಾಜ್ಯದಲ್ಲಿ 45 ದಿನಗಳ ಲಾಕ್ ಡೌನ್ ನಿಂದ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಇದರಿಂದ ಜನ ಮದ್ಯ ಕುಡಿಯೋದನ್ನ ಮರೆತು ಬಿಟ್ಟಿದ್ದರು. ಸರ್ಕಾರ ಸಂಪೂರ್ಣ ಮದ್ಯ ಮಾರಾಟ ಬಂದ್ ಮಾಡಬೇಕು ಅನ್ನೋದು ನನ್ನ ವಯಕ್ತಿಕ ಅಭಿಪ್ರಾಯ. ಆದ್ರೆ ಈ ಸಂದರ್ಭದಲ್ಲಿ ಇದು ಸರ್ಕಾರಕ್ಕೆ ಕಷ್ಟ ಎಂದರು.