ಯಾದಗಿರಿ: ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ವಿರೋಧಿಸಿ ನಗರದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.
ನಗರದ ಶೇಹ್ನಾ ಲೇಔಟ್ನಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ಸಾದಾಯೆ ಮಿಲ್ಲತ್ ಕಮಿಟಿಯಿಂದ ಆಯೋಜನೆ ಮಾಡಲಾಗಿದ್ದ ಈ ಸಮಾವೇಶಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಇಬ್ರಾಹಿಂ, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಖನೀಜ್ ಫಾತಿಮಾ ಸೇರಿದಂತೆ ಹಲವು ಮಂದಿ ಮುಖಂಡರು ಸಿಎಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ದಲಿತ ಮುಖಂಡ ಗುರುಶಾಂತ ಪಟ್ಟೇದ್ದಾರ, ಮೋದಿ ಹಾಗೂ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇವರ ಮಾತಿನ ಘಾಟಿ ಜೋರಾದಂತೆ ಭಾಷಣ ನಿಲ್ಲಿಸಲು ವೇದಿಕೆ ಮೇಲಿದ್ದ ಗಣ್ಯರು ಸಲಹೆ ನೀಡಿದ ಪ್ರಸಂಗವೂ ನಡೆಯಿತು.