ಗುರುಮಠಕಲ್(ಯಾದಗಿರಿ) : ಸ್ನೇಹಿತನ ಮದುವೆಗೆಂದು ಬಂದಿದ್ದ ಸ್ನೇಹಿತ ಮಸಣ ಸೇರಿದ್ದಾನೆ. ಗುರುಮಠಕಲ್ ತಾಲೂಕಿನ ಸೈದಾಪುರ ಗ್ರಾಮದ ಹೊರಭಾಗದಲ್ಲಿ ಈ ಘಟನೆ ಜರುಗಿದೆ.
ಕ್ಯಾತನಾಳ ಗ್ರಾಮದ ನಿವಾಸಿ ಶರಣಪ್ಪ ಕೊಲೆಯಾದವರು. ಈತ ಬೆಂಗಳೂರಿನಲ್ಲಿ ವಾಸವಾಗಿದ್ದ. ಊರಲ್ಲಿ ಸ್ನೇಹಿತನಾದ ಮಹೇಶ ಎಂಬಾತನ ಮದುವೆ ಹಿನ್ನೆಲೆ ಬೆಂಗಳೂರುನಿಂದ ಆಗಮಿಸಿದ್ದ.
ಹೊಸದಾಗಿ ಮದುವೆಯಾದ ಜೋಡಿಗೆ ಕೇಕ್ ಕತ್ತರಿಸುವ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆ ಸ್ನೇಹಿತ ಶರಣಪ್ಪ ತನ್ನ ಗೆಳೆಯರಾದ ಹಣಮಂತನ ಜತೆ ಬೈಕ್ ಮೂಲಕ ಸೈದಾಪುರಕ್ಕೆ ತೆರಳಿ ಕೇಕ್ ಖರೀದಿ ಮಾಡಿ ಕ್ಯಾತನಾಳ ಗ್ರಾಮಕ್ಕೆ ಬರುತ್ತಿದ್ದರು.

ಈ ವೇಳೆ ಸೈದಾಪುರ ಗ್ರಾಮದ ಹೊರಭಾಗದ ಕ್ಯಾತನಾಳ ಕ್ರಾಸ್ ಹತ್ತಿರ ಟ್ರ್ಯಾಕ್ಟರ್‌ವೊಂದನ್ನು ರಸ್ತೆ ಮೇಲೆ ನಿಲ್ಲಿಸಿದ ಹಿನ್ನೆಲೆ ಶರಣಪ್ಪ ರಸ್ತೆ ಮೇಲೆ ಟ್ರ್ಯಾಕ್ಟರ್ ನಿಲ್ಲಿಸಿದರೆ ನಾವು ಊರಿಗೆ ಹೋಗುವುದು ಹೇಗೆ ಎಂದು ಟ್ರ್ಯಾಕ್ಟರ್ನಲ್ಲಿದ್ದ ಶರಣಬಸವ ಹಾಗೂ ಸಿದ್ಲಿಂಗ್ ಎಂಬುವರಿಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಶರಣಬಸವ ಹಾಗೂ ಸಿದ್ಲಿಂಗ್, ಶರಣಪ್ಪನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ನಿನ್ನೆ (ಸೋಮವಾರ) ಸಂಜೆ ಈ ಘಟನೆ ಜರುಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಮೃತ ಶರಣಪ್ಪ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಡಿತದ ಮತ್ತಿನಲ್ಲಿ ಹಲ್ಲೆ ಮಾಡಿದವ ಹತ್ಯೆಯಾದ.. ಕೊಲೆ ಆರೋಪಿ ಪೊಲೀಸರಿಗೆ ಶರಣು!