ಯಾದಗಿರಿ(ಗುರುಮಠಕಲ್): ಕೊರೊನಾ ದೇಶದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ರೈತರು, ಬೆಳೆಗಾರರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ , ಬೆಲೆ ಸಿಗದೆ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆದಿರುವ ರೈತ ಮಾರುಕಟ್ಟೆಯಿಲ್ಲದೆ ಪರದಾಡುತ್ತಿದ್ದಾನೆ.
ಮೂಲತಃ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಬಿಳಿಚಕ್ರ ಗ್ರಾಮದ ಮಹೇಂದ್ರ ಪೂಜಾರಿ ಎಂಬ ರೈತ, ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೃಷಿ ಮೇಲಿನ ಒಲವಿನಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ತನ್ನ ಜಾಮೀನಿಲ್ಲಿ ಬೀಟ್ರೋಟ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ 2 ಎಕರೆ ಜಾಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದು, ಉತ್ತಮ ಬೆಳೆ ಬಂದಿದೆ. ಆದರೆ ಲಾಕ್ಡೌನ್ ಸಂಬಂಧ ಕಲ್ಲಂಗಡಿ ಕೊಂಡುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇತ್ತೀಚಿಗಷ್ಟೆ ಯಾದರಿಗಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ರೈತರೊಬ್ಬರ 300 ಕ್ವಿಂಟಲ್ ಕಲ್ಲಂಗಡಿ ಖರೀದಿಸಿ, ಹಂಚಿಕೆ ಮಾಡಿದ್ದರು.
ಅದೇ ರೀತಿ ತಾನು ಬೆಳೆದ ಕಲ್ಲಂಗಡಿಯನ್ನು ಖರೀದಿ ಮಾಡಲು ಯಾರಾದರೂ ಮುಂದೆ ಬರುತ್ತಾರೋ ಎಂಬ ನಿರೀಕ್ಷೆಯಲ್ಲಿ ರೈತ ಮಹೇಂದ್ರ ಕಾಯುತ್ತಿದ್ದು, ಇವರ ಬಳಿ ಬೆಳೆ ಖರೀದಿಸುವವರು ಇಚ್ಚಿಸುವವರು ಸಂಪರ್ಕಿಸಲು ದೂರವಾಣಿ ಸಂಖ್ಯೆ: 7350196302 ಕರೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.