ಸುರಪುರ/ಯಾದಗಿರಿ: ಬಾಕಿ ಉಳಿಸಿಕೊಂಡಿರುವ ಕೂಲಿಹಣವನ್ನು ನೀಡುವಂತೆ ಆಗ್ರಹಿಸಿ ಸುರಪುರ ತಾಲೂಕು ಪಂಚಾಯತ್ ಮುಂದೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಧರಣಿ ನಡೆಸಿದ್ರು.
ತಾಲೂಕಿನ ಅದಕೇರಾ ಗ್ರಾಮ ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಕಾರ್ಮಿಕರಾದ ಪದ್ಮಾವತಿ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮಿಂದ ಕೂಲಿ ಮಾಡಿಸಿಕೊಂಡು ಎರಡು ತಿಂಗಳಾದರೂ ಕೂಲಿ ಹಣ ನೀಡಿಲ್ಲ. ಆದ್ದರಿಂದ ಕೂಲಿ ನೀಡುವವರೆಗೆ ಧರಣಿ ಮಾಡುವುದಾಗಿ ತಿಳಿಸಿದರು.
ಧರಣಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಆಗಮಿಸಿ, ಕೂಲಿಕಾರರ ಮನವಿ ಆಲಿಸಿ ನಂತರ ಮಾತನಾಡಿ, ನಿಮ್ಮ ಕೂಲಿ ಹಣವನ್ನು ಒಂದು ವಾರದೊಳಗೆ ನೀಡುವುದಾಗಿ ಭರವಸೆ ನೀಡಿದ ನಂತರ ಧರಣಿ ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ವಿಶ್ವನಾಥ, ಕಾರ್ಮಿಕ ಹೋರಾಟಗಾರ ಶರಣು ಅನಸೂರ ಸೇರಿದಂತೆ ಅನೇಕ ಜನ ಮಹಿಳಾ ಕೂಲಿಕಾರರಿದ್ದರು.