ಯಾದಗಿರಿ : ಜಿಲ್ಲೆಯ ಸುರಪುರ ಮತಕ್ಷೇತ್ರದ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಏ.6 ರಂದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಹಲ್ಲೆ ಹಾಗೂ ಕಲ್ಲು ತೂರಾಟದಲ್ಲಿ ಭಾಗಿಯಾಗಿರುವ ಸಂಬಂಧ ಒಟ್ಟು 10 ಪ್ರಕರಣ ದಾಖಲಾಗಿದ್ದು ಈ ಪೈಕಿ 7 ಕ್ರಿಮಿನಲ್ ಹಾಗೂ 3 ಚುನಾವಣೆ ನೀತಿ ಸಂಹಿತೆ ಪ್ರಕರಣಗಳು ಸೇರಿವೆ. ಇಲ್ಲಿಯವರೆಗೆ 27 ಜನರನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.
ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಈಗಾಗಲೇ ಘಟನೆ ನಡೆದ ಸ್ಥಳದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್, ರಿಸರ್ವ್ ಪೊಲೀಸ್, ಡಿಎಆರ್ ಹಾಗು 200ಕ್ಕೂ ಹೆಚ್ಚು ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಉಪ ವರಿಷ್ಠಾಧಿಕಾರಿ, ಸಿಪಿಐ, ಪಿಎಸ್‌ಐ, ಪೊಲೀಸ್ ಸಿಬ್ಬಂದಿಯನ್ನು ಶಾಂತಿ ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುರಪುರ, ಹುಣಸಗಿ, ಕೊಡೇಕಲ್, ನಾರಾಯಣಪುರ ಪಟ್ಟಣದಲ್ಲಿ ಪೊಲೀಸ್ ಪಡೆಯಿಂದ ಸಾರ್ವಜನಿಕರಿಗೆ ಧೈರ್ಯ ತುಂಬುವ ಉದ್ದೇಶದ ಭಾಗವಾಗಿ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾದ್ಯಂತ 18 ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ನಗರ ಪ್ರದೇಶಗಳಲ್ಲಿಯೂ ಚೆಕ್ ಪೋಸ್ಟ್ ರಚಿಸಿದ್ದು ವಾಹನಗಳಲ್ಲಿ ಅಕ್ರಮ ಹಣ ಸಾಗಣಿಕೆ ಮಾಡುವುದಾಗಲಿ, ಮತದಾರರನ್ನು ಸೆಳೆಯಲು ಇನ್ನಿತರ ಯಾವುದೇ ರೀತಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದಾಗಲಿ ಅಥವಾ ಗಲಭೆ ಮಾಡಲು ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಇಂತಹ ಘಟನೆಗಳು ನಡೆದರೆ ಅಂಥವರ ವಿರುದ್ದ ಪ್ರಕರಣ ದಾಖಲಿಸಲು ನಿರ್ದೇಶನ ಮಾಡಲಾಗಿದೆ ಎಂದು ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದರು.
ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಏ.6 ರಂದು 118 ಜನರ ಮೇಲೆ ಪ್ರಕರಣ ದಾಖಲಾಗಿವೆ. ಏ.8 ರಂದು 194 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಏ.6 ರಿಂದ ಏ.8 ರವರೆಗೆ 144 ಸೆಕ್ಷನ್ ಜಾರಿಗೊಳಿಸಿ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಆದೇಶ ಹೊರಡಿಸಿದ್ದರು. ಇದೀಗ ಈ ಪ್ರಕರಣವನ್ನು ಅತೀ ಸೂಕ್ಷ್ಮವೆಂದು ಪರಿಗಣಿಸಿದ ಜಿಲ್ಲಾಧಿಕಾರಿ ಏ.8 ರಿಂದ 12 ರವರೆಗೆ ಆದೇಶ ಜಾರಿಯಲ್ಲಿರುತ್ತದೆ ಎಂದು ಆದೇಶ ಹೊರಡಿಸಿದ್ದಾರೆ. ಇದರಿಂದ ಪಟ್ಟಣದಲ್ಲಿ ಕಟ್ಟುನಿಟ್ಟಿನ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ.. 4 ಎಫ್‌ಐಆರ್, 18 ಮಂದಿ ವಶಕ್ಕೆ