ಯಾದಗಿರಿ: ಕೋವಿಡ್-19ಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದ ಉಮೇಶ್ ಜಾಧವ್, ಗುರುಮಿಠಕಲ್ ತಾಲೂಕಿನಲ್ಲಿ ಆರೋಗ್ಯ, ಪಡಿತರ, ಮೂಲ ಸೌಕರ್ಯಗಳಿಗೆ ಸಂಬಂಧಿತ ವ್ಯವಸ್ಥೆಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸುವಂತೆ ಹಾಗೂ ಪಟ್ಟಣದಲ್ಲಿ ಆಹಾರ ಉಗ್ರಾಣ ಕೇಂದ್ರ ನಿರ್ಮಿಸುವಂತೆ ಸೂಚಿಸಿದರು.
ಸಾಮಗ್ರಿಗಳನ್ನು ಎರಡು ದಿನಗಳಲ್ಲಿ ಪಡಿತರ ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ಅವುಗಳನ್ನು ಶೀಘ್ರವಾಗಿ ಸಾರ್ವಜನಿಕರಿಗೆ ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ದೇಶವು ಕಷ್ಟಕರ ಸನ್ನಿವೇಶ ಎದುರಿಸುತ್ತಿದೆ. ಸಾರ್ವಜನಿಕರ ಹಿತ ಕಾಯುವಲ್ಲಿ ಯಾವುದೇ ಪಕ್ಷಗಳ ರಾಜಕೀಯ ಸಲ್ಲದು ಎಂದು ಕಿವಿಮಾತು ಹೇಳಿದರು.
ಸೇವಾ ಸಂಸ್ಥೆಗಳ ಸಹಕಾರದಿಂದ ಇನ್ನೂ ಎರಡು ಮೊಬೈಲ್ ವ್ಯಾನ್ಗಳನ್ನು ನೀಡಲಾಗುವುದು. ಕೊರೊನಾ ವೈರಸ್ ಹರಡದಂತೆ ವಲಸೆ ಬಂದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಸಲಹೆ ಮತ್ತು ಸೂಕ್ತ ಚಿಕಿತ್ಸೆ ನೀಡಲಾಗುವುದು.
ವೆಂಟಿಲೇಟರ್, 15 ಥರ್ಮಲ್ ಸ್ಕ್ಯಾನರ್ ಹಾಗೂ ಪರಿಕರಗಳನ್ನು ತಾಲೂಕಿನ ಪ್ರತಿ ಆರೋಗ್ಯ ಕೇಂದ್ರಗಳಿಗೆ ಎರಡು ದಿನಗಳಲ್ಲಿ ವಿತರಿಸುವುದಾಗಿ ಭರವಸೆ ನೀಡಿದರು.