ಸುರಪುರ : ಸುರಪುರ ನಗರಸಭೆ ವ್ಯಾಪ್ತಿಯ ರಂಗಂಪೇಟೆಯಲ್ಲಿ ರಸ್ತೆ ಅಗಲೀಕರಣದ ಮಾಡಲಾಗುತ್ತಿದೆ. ಈ ಹಿನ್ನೆಲೆ ರಸ್ತೆಬದಿಗಳಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮನೆಗಳ ತೆರವು ಕಾರ್ಯ ಆರಂಭಗೊಂಡಿದೆ. 11 ಗಂಟೆ ವೇಳೆಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಮಂಡಳಿಯ ನಿಲ್ದಾಣದಿಂದ ಆರಂಭಗೊಂಡು ಮರೆಮ್ಮ ದೇವಸ್ಥಾನದವರೆಗೂ ನಡೆಯಿತು.
ರಸ್ತೆಯ ಎರಡು ಬದಿಗಳಲ್ಲಿ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಿದ ಕಟ್ಟಡಗಳನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಲಾಗುತ್ತಿದೆ. ಒಟ್ಟು 40 ಅಡಿ ಅಗಲವಾದ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ನಗರಸಭೆ, ರಸ್ತೆಯ ಮಧ್ಯದಿಂದ ಎಡಭಾಗಕ್ಕೆ 20 ಅಡಿ, ಬಲಭಾಗಕ್ಕೆ 20 ಅಡಿ ಅಳತೆಯಲ್ಲಿ ಇರುವ ಕಟ್ಟಡಗಳನ್ನು ತೆರವುಗೊಳಿಸುತ್ತಿದೆ.
ಕಾರ್ಯಾಚರಣೆಯ ಸ್ದಳದಲ್ಲಿರುವ ನಗರಸಭೆ ಅಧ್ಯಕ್ಷೆ ಸುಜಾತ ವೇಣುಗೋಪಾಲ ಜೇವರ್ಗಿಯವರು, ರಂಗಂಪೇಟೆಯ ಜನರಲ್ಲಿ ಮನವಿ ಮಾಡಿ ನಗರದ ಅಭಿವೃದ್ಧಿಗೆ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ಅಲ್ಪಮಟ್ಟಿನ ತೊಂದರೆ ಆದರೂ ನಗರದ ಅಭಿವೃದ್ಧಿ ದೃಷ್ಟಿಯಿಂದ ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಮಾತನಾಡಿ, ರಸ್ತೆ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಬಡವರ ಮನೆಗಳೇನಾದ್ರೂ ಅನಿವಾರ್ಯವಾಗಿ ತೆರವುಗೊಂಡಲ್ಲಿ ಅಂತವರಿಗೆ ಒಂದು ಸ್ಥಳ ಗುರುತಿಸಿ ಅವರಿಗೆ ಸರ್ಕಾರದಿಂದ ಮನೆ ನಿರ್ಮಿಸಿ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಈಗಾಗಲೇ ಸರ್ವೇ ನಡೆದ ಸಂದರ್ಭದಲ್ಲಿ 42 ಬಡಕುಟುಂಬಗಳ ಮನೆಗಳು ಹೋಗುತ್ತಿದ್ದು, ಅವರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಗರಸಭೆ ಯೋಚಿಸಿದೆ ಎಂದು ಹೇಳಿದರು.