ಯಾದಗಿರಿ: ಅತಿವೃಷ್ಟಿಯಿಂದ ಕಂಗಾಲಾದ ಜಿಲ್ಲೆಯ ರೈತರಿಗೆ ದಲ್ಲಾಳಿಗಳಿಂದ ಮಹಾ ಮೋಸ ನಡೆಯುತ್ತಿದ್ದು, ಹತ್ತಿ ಖರೀದಿ ವಿಚಾರವಾಗಿ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಹತ್ತಿ ಖರೀದಿಯಲ್ಲಿ ವಂಚಕರಿಂದ ಮಹಾ ಮೋಸ ನಡೆಯುತ್ತಿದ್ದು, ಇದರಿಂದ ಅಷ್ಟೋ ಇಷ್ಟೋ ಹತ್ತಿ ಬೆಳದ ಅಮಾಯಕ ರೈತರು ಮಹಾ ವಂಚನೆಗೆ ಬಲಿಪಶುಗಳಾಗುತ್ತಿದ್ದಾರೆ.
ಜಿಲ್ಲೆಯ ವಿವಿಧೆಡೆ ರಸ್ತೆ ಬದಿ ಹಾಕಲಾಗಿದ್ದ ಅನಧಿಕೃತ ಹತ್ತಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳಿಂದ ಮೋಸದ ದಂಧೆ ನಡೆಯುತ್ತಿರುವುದು ಪತ್ತೆಯಾಗಿದೆ. ಶಹಾಪುರ ತಾಲೂಕಿನ ಚಾಮನಾಳ ಗ್ರಾಮದ ರೈತ ಭೀಮಣ್ಣ ಎಂಬುವವರು ಹತ್ತಿ ಮಾರಾಟ ಮಾಡಲು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ರೈತ ಭೀಮಣ್ಣ ಬೆಳೆದ 100 ಕೆಜಿ ಹತ್ತಿ ಮಾರಾಟ ಮಾಡಲು ತಂದ್ರೆ 65 ಕೆಜಿ ಹತ್ತಿ ತೂಕವಿದೆ ಎಂದು ತಕ್ಕಡಿ ಯಂತ್ರದಲ್ಲಿ ತೋರಿಸಲಾಗಿದೆ. ತೂಕದ ಮೋಸ ಕಂಡು ಅಲ್ಲಿಯ ರೈತರು ದಿಗ್ಭ್ರಮೆಗೊಂಡಿದ್ದು, ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿಂದ ಆ ದಲ್ಲಾಳಿ ಕಾಲ್ಕಿತ್ತಿದ್ದಾನೆ.
ಯಾವುದೇ ಪರವಾನಗಿ ಪಡೆಯದೆ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಅನಧಿಕೃತ ಹತ್ತಿ ಖರೀದಿ ಕೇಂದ್ರಗಳು ತಲೆ ಎತ್ತಿವೆ. ಇಂತಹ ಅನಧಿಕೃತ ಹತ್ತಿ ಕೇಂದ್ರಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗುವ ಮೂಲಕ ಮೋಸ ಹೋಗುವ ರೈತರ ಬೆನ್ನಿಗೆ ನಿಲ್ಲಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.