ಸುರಪುರ: ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಆಹಾರ ಧಾನ್ಯದ ಪ್ರಮಾಣದಲ್ಲಿ, ಅರ್ಧದಷ್ಟು ಕಡಿಮೆ ನೀಡಿ ವಂಚಿಸಿರುವ ಆರೋಪ ಪ್ರಕರಣ ಕೆಂಭಾವಿ ಗ್ರಾಮದಲ್ಲಿ ನಡೆದಿದೆ.
ಗಾಯತ್ರಿ ಮಹಿಳಾ ಮಂಡಳಿ ನಡೆಸುವ ನ್ಯಾಯಬೆಲೆ ಅಂಗಡಿಯ ಪಡಿತರ ಚೀಟಿದಾರ ಮಲ್ಲಿಕಾರ್ಜುನ ರುದ್ರಪ್ಪ ಬಡಿಗೇರ ಎಂಬುವರಿಗೆ, ಕಳೆದ ಒಂದು ವರ್ಷದಿಂದ ಸರ್ಕಾರದಿಂದ 56 ಕೆ.ಜಿ. ಅಕ್ಕಿ ಬಂದಿದೆ. ಆದ್ರೆ ನ್ಯಾಯಬೆಲೆ ಅಂಗಡಿಯವರು ಕೇವಲ 28 ಕೆ.ಜಿ. ಮಾತ್ರ ನೀಡಿ ವಂಚಿಸಿದ್ದಾರೆ.
ಏಪ್ರಿಲ್ ತಿಂಗಳು ಕೊರೊನಾ ಲಾಕ್‌ಡೌನ್ ಕಾರಣದಿಂದ ಈ ಪಡಿತರದಾರರಿಗೆ ಸರ್ಕಾರ 80 ಕಿಲೋ ಅಕ್ಕಿ ನೀಡಿದರೆ, ನ್ಯಾಯಬೆಲೆ ಡೀಲರ್ ಕೇವಲ 40 ಕೆಜಿ ಮಾತ್ರ ನೀಡಿರುವ ಮೋಸ ಸರ್ಕಾರದ ವೆಬ್ ರಿಪೋರ್ಟ್ ಮೂಲಕ ಬೆಳಕಿಗೆ ಬಂದಿದೆ. ಈ ಕುರಿತು ನ್ಯಾಯಬೆಲೆ ಅಂಗಡಿ ಮೇಲೆ ಕ್ರಮ ಕೈಗೊಳ್ಳಲು ಪಡಿತರ ಚೀಟಿದಾರ ಮಲ್ಲಿಕಾರ್ಜುನ ಬಡಿಗೇರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಫಲಾನುಭವಿಗಳಿಗೆ ಕಡಿಮೆ ಪಡಿತರ ನೀಡುವ ಹಾಗೂ ಚೀಟಿದಾರರಿಂದ ಹಣ ಪಡೆದ ನ್ಯಾಯಬೆಲೆ ಅಂಗಡಿ ವಿರುದ್ಧ 420 ಕೇಸ್ ದಾಖಲಿಸುವುದಾಗಿ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹಾಗೂ ಶಾಸಕ ರಾಜುಗೌಡ ತಿಳಿಸಿದ್ದರು. ಈಗ ಈ ಅನ್ಯಾಯ ಮಾಡಿದ ನ್ಯಾಯಬೆಲೆ ಅಂಗಡಿ ಡೀಲರ್ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.