ಸುರಪುರ: ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದಲ್ಲಿ ನಾಲ್ವರು ವಿಕಲಚೇತನರು ಇದ್ದಾರೆ. ಈ ನಾಲ್ಕು ಮಕ್ಕಳನ್ನ ತಾಯಿಯೇ ಸಾಕಿ ಸಲಹುತ್ತಿದ್ದಾರೆ.
ಕನ್ನೆಳ್ಳಿ ಗ್ರಾಮದ ಬಸಲಿಂಗಮ್ಮ, ಯಮುನಪ್ಪ ಹೊಕ್ರಾಣಿ ದಂಪತಿಗೆ ಒಟ್ಟು 6 ಜನ ಮಕ್ಕಳಿದ್ದಾರೆ. ಇವರು 5 ಎಕರೆ ಜಮೀನು ಹೊಂದಿದ್ದಾರೆ. 10 ವರ್ಷಗಳ ಹಿಂದೆ ಮನೆಯ ಯಜಮಾನ ಯಮುನಪ್ಪ, ಅನಾರೋಗ್ಯದಿಂದ ಸಾವನ್ನಪ್ಪಿದರು. ಮನೆಯ ಸಂಪೂರ್ಣ ಜವಾಬ್ದಾರಿಯನ್ನ ಈ ತಾಯಿಯ ಹೊತ್ತುಕೊಂಡು ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದ್ದಾರೆ. ಆರು ಜನ ಮಕ್ಕಳಲ್ಲಿ, ನಾಲ್ವರು ವಿಶೇಷ ಚೇತನರಾಗಿದ್ದಾರೆ.
6 ಜನರಲ್ಲಿ ಓರ್ವ ಗಂಡು ಮಗ ಶಿವಪುತ್ರ ಹಾಗೂ ಓರ್ವ ಹೆಣ್ಣುಮಗಳು ನಾಗಮ್ಮ ಎಲ್ಲರಂತೆ ಆರೋಗ್ಯವಾಗಿದ್ದಾರೆ. ಆದರೆ ಮೂರು ಜನ ಗಂಡು ಮಕ್ಕಳು ಈರಣ್ಣ, ದೇವರಾಜ, ಮಧುರಂಗ ಹಾಗೂ ಓರ್ವ ಹೆಣ್ಣುಮಗಳು ದೇವಕ್ಕೆಮ್ಮ ವಿಶೇಷ ಚೇತನರಾಗಿದ್ದಾರೆ.
ಬಾಲ್ಯದಿಂದಲೇ ತನ್ನ ಮಕ್ಕಳನ್ನೂ ಅಕ್ಷರವಂತರನ್ನಾಗಿಸಲು ಆ ಗ್ರಾಮದ ಸರಕಾರಿ ಶಾಲೆಗೆ ಸೇರಿಸಿದರು. ಮಕ್ಕಳು 5 -6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಅಂಗವೈಕಲ್ಯ ಕಾಣಿಸತೊಡಗಿತು. ಅದು ಎಷ್ಟರ ಮಟ್ಟಿಗೆ ಎಂದರೆ ಎಲ್ಲಾ ಮಕ್ಕಳಂತೆ ಆಟ, ಪಾಠ , ಓದು ಅಂತ ಇದ್ದ ಮಕ್ಕಳು ತಾಯಿಯ ಆಸರೆ ಇಲ್ಲದೆ ದಿನನಿತ್ಯದ ಕಾರ್ಯಕ್ಕೂ ಹೋಗಲಾರದಷ್ಟು ಅಂಗವೈಕಲ್ಯ ಈ ಮಕ್ಕಳಲ್ಲಿ ಕಾಡತೊಡಗಿತು. ಆದರೆ ಇದಕ್ಕೆಲ್ಲಾ ಎದೆಗುಂದದೆ ಈ ತಾಯಿ ತನ್ನ ಮಕ್ಕಳನ್ನು ಸಾಕಿ ಸಲುಹಿದಳು.
ಎಲ್ಲಾ ಮಕ್ಕಳಂತೆ ಇವರು ಕೂಡಾ ಶಾಲೆಗೆ ಬರುತ್ತಿದ್ದರು. ನಮ್ಮ ಜೊತೆ ಐದನೇ ತರಗತಿ ಓದುವಾಗ ಇವರಿಗೆ ಅಂಗವೈಕಲ್ಯ ಉಂಟಾಯಿತು. ಆದರೆ ಇವರು ಎದೆಗುಂದಲಿಲ್ಲ ಸ್ವಂತ ಪಾನ್ ಶಾಪ್ ಇಟ್ಟುಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುತ್ತಾರೆ ಅವರ ಸ್ನೇಹಿತರು.