ಸುರಪುರ: ಸುರಪುರ ಬಸ್ ಡಿಪೋದ ನಾಲ್ವರು ಚಾಲಕರಲ್ಲಿ ಹಾಗೂ ಹುಣಸಗಿಯ ಒಬ್ಬರು ಶಿಕ್ಷಕರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೇಲೆ ಕೊರೊನಾ ಕರಿನೆರಳು ಬಿದ್ದಂತಾಗಿದೆ.
ನಾಳೆಯೇ ಪರೀಕ್ಷೆ ಇದ್ದು ಸುರಪುರ ಮತ್ತು ಹುಣಸಗಿ ತಾಲೂಕಿನ ಗ್ರಾಮೀಣ ಭಾಗದಿಂದ ಪ್ರತಿ ಶತ 70% ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಬರಲಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರಲು ಕೆಎಸ್ಆರ್ಟಿಸಿ ಬಸ್‌ಗಳನ್ನೇ ಕಳುಹಿಸಲಾಗುತ್ತಿದೆ.
ಆದರೆ ಸದ್ಯ ನಾಲ್ವರು ಚಾಲಕರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರಿಂದ ಈ ನಾಲ್ವರ ಪ್ರಾಥಮಿಕ ಸಂಪರ್ಕ ಯಾರೊಂದಿಗೆ ಇತ್ತು ಎಂಬುದನ್ನು ಖಚಿತಪಡಿಸಿ ಆ ಎಲ್ಲಾ ಚಾಲಕ ನಿರ್ವಾಹಕರನ್ನು ಕ್ವಾರಂಟೈನ್ ಮಾಡುವುದರೊಳಗೆ ಸೊಂಕು ಇನ್ನು ಯಾರ್ಯಾರಿಗೆ ತಗುಲಲಿದೆ ಎಂಬುದು ಸದ್ಯದ ತಲೆ ನೋವಾಗಿದೆ.
ಅಲ್ಲದೆ ನಾಳೆಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕರೆತರಲು ಯಾವ ಚಾಲಕ ನಿರ್ವಾಹಕರನ್ನು ಕಳುಹಿಸಬೇಕೆಂಬುದು ಕೂಡ ಯಕ್ಷ ಪ್ರಶ್ನೆಯಾಗಿದೆ. ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಇಡೀ ಬಸ್, ಡಿಪೋ ಸ್ಯಾನಿಟೈಜ್ ಮಾಡಬೇಕಿದೆ. ಆದರೆ ಈವರೆಗೆ ಸ್ಯಾನಿಟೈಜ್ ಮಾಡಲಾಗಿಲ್ಲ ಎಂದು ತಿಳಿದು ಬಂದಿದ್ದು ಮುಂದೇನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.