ಯಾದಗಿರಿ: ಹೆಣ್ಣು ಮಗು ಹುಟ್ಟಿದೆ ಎಂದು ಮೊದಲಿನಿಂದಲೂ ಸಿಟ್ಟಿನಲ್ಲಿ ಪಾಪಿಯೊಬ್ಬ 9 ತಿಂಗಳ ಹಸುಗೂಸನ್ನು ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಅಮಾನವೀಯ ಪ್ರಕರಣ ಜಿಲ್ಲೆಯ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.
ತನುಶ್ರೀ ಮೃತ ಕಂದಮ್ಮ. ರಾಮು ಪಲ್ಲುರ್ ಕೊಲೆ ಮಾಡಿದ ಆರೋಪಿ ತಂದೆ. ರಾಮು ಮತ್ತು ಸಾವಿತ್ರಿ ದಂಪತಿಗೆ 9 ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಹೆಣ್ಣು ಮಗು ಜನಿಸಿದ್ದಕ್ಕೆ ರಾಮು ಪಲ್ಲುರ್ ಬೇಸರಗೊಂಡಿದ್ದ. ಮಗುವಿನ ಆರೈಕೆಗಾಗಿ ಕೂಲಿ ಕೆಲಸ ಬಿಟ್ಟು ಪತ್ನಿ ಮನೆಯಲ್ಲೇ ಇದ್ದರು. ಮನೆಯಲ್ಲಿ ನಾನೇ ಮಗುವನ್ನು ನೋಡಿಕೊಳ್ಳುತ್ತೇನೆ, ನೀನು ಕೆಲಸಕ್ಕೆ ಹೋಗು ಎಂದು ಪತ್ನಿಯನ್ನು ಪತಿ ನವೆಂಬರ್ 30 ರಂದು ಕೆಲಸಕ್ಕೆ ಕಳುಹಿಸಿದ್ದ.
ಪತ್ನಿ ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿ ಮಗು ಅಳುತ್ತಿದ್ದರಿಂದ ಕಿರಿಕಿರಿ ತಾಳದೇ ಮಗುವಿನ ಕೊರಳಲ್ಲಿದ್ದ ದಾರದಿಂದಲೇ ಬಿಗಿದು ತಂದೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕುಡಿದ ನಶೆಯಲ್ಲಿ ಮಗು ಕೊಂದು, ಬಳಿಕ ಹೊಲಕ್ಕೆ ಹೋಗಿ ತನ್ನ ಹೆಂಡ್ತಿಗೆ ಈ ಬಗ್ಗೆ ತಿಳಿಸಿದ್ದಾನೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಪತ್ನಿ ಸಾವಿತ್ರಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ:ಛತ್ತೀಸ್ಗಢದಲ್ಲಿ ಶ್ರದ್ಧಾ ಮಾದರಿ ಕೊಲೆ: ಪ್ರಿಯತಮೆ ಕೊಂದು ಸುಟ್ಟು ಹಾಕಿದ ಪ್ರಿಯಕರ