ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್-19 ಪಾಸಿಟಿವ್ ವ್ಯಕ್ತಿಗಳಿಗೆ 50 ಹಾಸಿಗೆಯುಳ್ಳ ಪ್ರತ್ಯೇಕ ಐಸೋಲೇಶನ್ ವಾರ್ಡ್ ಸ್ಥಾಪನೆಯಾಗಿದ್ದು, ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಪ್ರತಿ ಬೆಡ್‍ಗೆ ಸಮರ್ಪಕವಾಗಿ ಆಕ್ಸಿಜನ್ ಸಂಪರ್ಕ ವ್ಯವಸ್ಥೆ ಆಗಬೇಕು. ಕೋವಿಡ್-19 ಐಸೋಲೇಶನ್ ವಾರ್ಡ್ ಮತ್ತು ಸಾಮಾನ್ಯ ರೋಗಿಗಳ ವಾರ್ಡ್‍ಗಳಿಗೆ ಯಾವುದೇ ರೀತಿಯ ಸಂಪರ್ಕ ಇರಬಾರದು. ಈ ನಿಟ್ಟಿನಲ್ಲಿ 50 ಹಾಸಿಗೆಗಳು ಒಂದೇ ಕಡೆ ಇರಬೇಕು. ಐಸೋಲೇಶನ್ ವಾರ್ಡ್ ಗೆ ಪ್ರತ್ಯೇಕ ಪ್ರವೇಶ ದ್ವಾರ ಇರಲಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಇದೇ ವೇಳೆ ಫೀವರ್ ಕ್ಲಿನಿಕ್ ಮತ್ತು ಗಂಟಲು ದ್ರವ ಮಾದರಿ ಸಂಗ್ರಹ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕೆ. ಅವರು ಉಪಸ್ಥಿತರಿದ್ದರು.