ಸುರಪುರ/ಯಾದಗಿರಿ: ಸುರಪುರ ತಾಲೂಕಿನ ಲಕ್ಷ್ಮಿಪುರ (ಅರಕೇರಾ .ಜೆ ಗ್ರಾಮ) ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
ದೇವರಾಜ್ ನಾಯಕ ಎಂಬುವವರು ಮಾತನಾಡಿ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಾಸ್ಕ್ ನೀಡಿಲ್ಲ ಸ್ಯಾನಿಟೈಜರ್ ಕೂಡಾ ನೀಡಿಲ್ಲ. ಅಲ್ಲದೆ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಕಳಿಗೆ ನೆರಳಿನ ವ್ಯವಸ್ಥೆ ಕೂಡಾ ಇಲ್ಲವಾಗಿದೆ. ಅಲ್ಲದೆ ಈಗ ಕಾರ್ಮಿಕರಿಗೆ ನೀಡುತ್ತಿರುವ 280 ರೂಪಾಯಿ ಹಣ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಪ್ರತಿದಿನದ ಕೂಲಿಯನ್ನು ಕನಿಷ್ಠ 600 ರೂಪಾಯಿಗೆ ಏರಿಸಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರ ಈ ಕೂಲಿ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ ಕೂಲಿ ಹಣ ಹೆಚ್ಚಿಸಿ ನೆರವಾಗುವುದೆ ಎಂಬುದನ್ನು ಕಾದು ನೋಡಬೇಕಿದೆ.