ಗುರುಮಠಕಲ್: ಕೊರೊನಾ ವೈರಸ್ ತಡೆಗಟ್ಟಿ, ಎಲ್ಲರ ಆರೋಗ್ಯ ಕಾಪಾಡುವಲ್ಲಿ ಪೌರಾಡಳಿತದ ಜೊತೆ ಸಾರ್ವಜನಿಕರು ಹಾಗೂ ಪಟ್ಟಣದ ವ್ಯಾಪಾರಿಗಳೂ ಸಹಕಾರ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಜೀವನಕುಮಾರ ಕಟ್ಟೀಮನಿ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕು ತಹಶೀಲ್ದಾರ್ ಸಂಗಮೇಶ ಅವರ ನೇತೃತ್ವದಲ್ಲಿ ಪಟ್ಟಣದ ಎಲ್ಲಾ ವ್ಯಾಪಾರಿಗಳ ಜೊತೆ ಸಭೆ ನಡೆಸಿದ ಅವರು, ಸರಕಾರವು ಕೊರೊನಾ ವೈರಸ್ ಸೋಂಕು ಹರಡದಂತೆ ಹಲವಾರು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಅದರ ಅನ್ವಯ ಪಟ್ಟಣದ ವ್ಯಾಪ್ತಿಯ ಎಲ್ಲಾ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ವ್ಯವಹಾರ ಮಾಡಬೇಕು. ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ತಿಳಿಸಬೇಕು. ಮತ್ತು ಎಲ್ಲಾ ಅಂಗಡಿ, ಮುಂಗಟ್ಟುಗಳ ಮುಂದೆ ಭೌತಿಕ ಅಂತರ ಕಾಪಾಡುವುದರ ಜೊತೆಗೆ ಸ್ಯಾನಿಟೈಸರ್ ಮತ್ತು ಎಲ್ಲೆಂದರಲ್ಲೆ ಉಗುಳುವುದನ್ನು ತಡೆಗಟ್ಟಿ ಪಟ್ಟಣದ ಆರೋಗ್ಯವನ್ನು ಕಾಪಾಡುವಂತೆ ತಿಳಿಸಿದರು.
ಒಂದು ವೇಳೆ ಯಾರಾದರೂ ಮಾಸ್ಕ್ ಇಲ್ಲದೆ ತಿರುಗಾಡುವುದು ಕಂಡು ಬಂದರೆ ಯಾವುದೇ ಮುಲಾಜು ಇಲ್ಲದೆ ದಂಡ ವಿಧಿಸಲಾಗುವುದು. ತಮ್ಮ ಅಂಗಡಿ, ಮುಂಗಟ್ಟುಗಳ ಮುಂದೆ ಮಾಸ್ಕ್ ಇಲ್ಲದೆ ವ್ಯವಹಾರ, ವ್ಯಾಪಾರ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ವ್ಯಾಪಾರಸ್ಥರ ಮೇಲೆ ದಂಡ ಮತ್ತು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಗ್ರಾಹಕರಿಗೆ ಪದೇ ಪದೇ ತಿಳಿಸಿಹೇಳುವ ಮೂಲಕ ಜಾಗೃತಿ ಮೂಡಿಸುವಂತೆ ತಿಳಿಸಿದರು.