ಸುರಪುರ/ಯಾದಗಿರಿ: ಕೊರೊನಾ ಹರಡದಂತೆ ಮನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆ ಜನರು ಮನೆಯಿಂದ ಹೊರ ಬರದೆ ಜೀವನ ನಡೆಸಲು ತೊಂದರೆಯಾಗುತ್ತಿರುವುದನ್ನ ಅರಿತ ಸರ್ಕಾರ ಪ್ರತಿ ಕುಟುಂಬಕ್ಕೆ ಎರಡು ತಿಂಗಳ ಉಚಿತ ಪಡಿತರ ಧಾನ್ಯ ನೀಡುತ್ತಿದೆ.
ನ್ಯಾಯಬೆಲೆ ಅಂಗಡಿ ಡೀಲರ್‌ಗಳು ಪ್ರತಿ ಗ್ರಾಮಕ್ಕೆ ಹೋಗಿ ಎರಡು ತಿಂಗಳ ಪಡಿತರ ಉಚಿತವಾಗಿ ನೀಡಬೇಕು. ಒಂದು ವೇಳೆ ಎರಡು ತಿಂಗಳ ಪಡಿತರ ನೀಡದಿದ್ದಲ್ಲಿ ಮತ್ತು ಯಾರಿಂದಲಾದರೂ ಹಣ ಪಡೆದಿದ್ದು ಗೊತ್ತಾದರೆ ಅಂತಹ ಡೀಲರ್ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಶಾಸಕ ರಾಜುಗೌಡ ಸುರಪುರ ಎಚ್ಚರಿಕೆ ನೀಡಿದ್ದಾರೆ.
ಇನ್ನು ರೇಷನ್ ಕಾರ್ಡ್ ಇಲ್ಲದವರಿಗೂ ಪಡಿತರ ವಿತರಣೆ ಮಾಡಬೇಕು. ಕೆಲವು ಕಾರ್ಡುದಾರರು ಮೊಬೈಲ್ ನಂಬರ್ ಲಿಂಕ್ ಮಾಡಿಸದೆ ಒಟಿಪಿ ಬರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ಬಂದಿದ್ದು, ಅಂತಹ ಕಾರ್ಡುದಾರರಿಗೂ ಆ ಕುಟುಂಬದ ಒಬ್ಬರಿಂದ ಬರೆಯಿಸಿಕೊಂಡು ಪಡಿತರ ನೀಡಲು ನಿಯಮ ರೂಪಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಯಾರಿಗೂ ಆಹಾರದ ತೊಂದರೆಯಾಗದಂತೆ ಸರ್ಕಾರ ಯೋಜನೆ ರೂಪಿಸಿದ್ದು, ಬಡ ಜನತೆಗೆ ತಲುಪಿಸುವ ಕೆಲಸ ರೇಷನ್ ಅಂಗಡಿ ಡೀಲರ್‌ಗಳು ಮಾಡಬೇಕು ಎಂದು ತಿಳಿಸಿದರು.
ಅಲ್ಲದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.