ಯಾದಗಿರಿ: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಜಾರಿಯಾಗಿದ್ದು, ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸ್ ಆಗುತ್ತಿರುವ ಕಾರ್ಮಿಕರ ಮೇಲೆ ಜಿಲ್ಲಾಡಳಿತ ಚೆಕ್ ಪೋಸ್ಟ್ ನಿರ್ಮಿಸಿ ವ್ಯಾಪಕ ಕಟ್ಟೆಚ್ಚರಕ್ಕೆ ಮುಂದಾಗಿದೆ.
ತಾಲೂಕಿನ ಗಡಿ ಭಾಗವಾದ ಯರಗೋಳ ಗ್ರಾಮದ ಹೊರವಲಯದಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಈ ಮೂಲಕ ಮಹಾರಾಷ್ಟ್ರದಿಂದ ವಾಹನಗಳ ಮೂಲಕ ಆಗಮಿಸುತ್ತಿರುವ ಕಾರ್ಮಿಕರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಆ ಬಳಿಕವಷ್ಟೇ ಪೋಲಿಸರು ಕಾರ್ಮಿಕರನ್ನ ಜಿಲ್ಲೆಯ ಒಳಗಡೆ ಪ್ರವೇಶ ಮಾಡಲು ಬಿಡುವ ಮೂಲಕ ನಿಗಾ ವಹಿಸುತ್ತಿದ್ದಾರೆ.
ಮಹಾರಾಷ್ಟ್ರದಿಂದ ಕಲಬುರಗಿ ಮೂಲಕ ಯಾದಗಿರಿ ಜಿಲ್ಲೆಗೆ ಬಸ್, ಖಾಸಗಿ ವಾಹನಗಳ ಮೂಲಕ ಎಂಟ್ರಿ ಕೊಡುತ್ತಿರುವ ಕಾರ್ಮಿಕರು ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಬರದಿದ್ದರೆ ಅಂತಹವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತೀವ್ರ ತಪಾಸಣೆ ನಡೆಸುವ ಮೂಲಕ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು, ಜಿಲ್ಲೆಯ ವಲಸೆ ಕಾರ್ಮಿಕರು ತವರಿಗೆ ವಾಪಸ್ ಆಗುತ್ತಿದ್ದಾರೆ. ಇದರಿಂದ ಮತ್ತೆ ಜಿಲ್ಲೆಯಲ್ಲಿ ಕೊರೊನಾ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗಿದೆ.