ಸುರಪುರ: ಕೊರೊನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಗುಳೆ ಹೋದವರನ್ನು ಕರೆ ತಂದು ಇರಿಸಲಾದ ನಗರದಲ್ಲಿನ ಬಹುತೇಕ ಕ್ವಾರಂಟೈನ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇರುವುದಾಗಿ ದಿಗ್ಬಂಧನಗೊಂಡಿರುವ ಕಾರ್ಮಿಕರು ಆರೋಪಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಅವರು, ಒಂದೊಂದು ಸೆಂಟರ್ನಲ್ಲಿ ನೂರಾರು ಜನರಿದ್ದೇವೆ. ನಮಗೆ ಸರಿಯಾಗಿ ಕುಡಿಯಲು ನೀರಿಲ್ಲ, ಬೆಳಿಗ್ಗೆಯಿಂದ ಇನ್ನೂ ಊಟ ತಿಂಡಿ ನೀಡಿಲ್ಲವೆಂದು 10:30ರ ಸುಮಾರಿಗೆ ನೋವು ತೋಡಿಕೊಂಡಿದ್ದಾರೆ.
ನಮ್ಮಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಆ ಮಕ್ಕಳಿಗೆ ಹಾಲು, ಬಿಸ್ಕೆಟ್, ಬ್ರೆಡ್ ಕೊಡುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಏನನ್ನು ನೀಡಿಲ್ಲ. ಮಕ್ಕಳು ಅಳುವುದು ನೋಡಿ ದುಃಖವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಜಿಲ್ಲಾ ಮತ್ತು ತಾಲೂಕು ಆಡಳಿತ ನಮಗೆ ಸರಿಯಾಗಿ ಊಟ ನೀರು ಕೊಡದಿದ್ದರೆ ನಮ್ಮನ್ಯಾಕೆ ಇಲ್ಲಿ ತಂದಿರಿಸಿದ್ದೀರಿ. ಸುಮ್ಮನೆ ಕಳುಹಿಸಿಬಿಡುವಂತೆ ಆಕ್ರೋಶ ಹೊರ ಹಾಕಿದರು. ಕ್ವಾರಂಟೈನಲ್ಲಿರುವವರು ನಮ್ಮಂತೆ ಮನುಷ್ಯರೇ. ಅವರ ಬಗ್ಗೆ ತುಂಬಾ ಕಾಳಜಿ ವಹಿಸುವಂತೆ ಅನೇಕ ಜನ ಪ್ರಜ್ಞಾವಂತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.