ಯಾದಗಿರಿ: ಮಹಾರಾಷ್ಟ್ರದಿಂದ ವಾಪಸ್ ಆದ 39 ವಲಸೆ ಕಾರ್ಮಿಕರಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 515 ಕ್ಕೆ ಏರಿಕೆಯಾಗಿದೆ.
1 ರಿಂದ 15 ವರ್ಷದ ಆರು ಮಕ್ಕಳು ಸೇರಿದಂತೆ ಒಟ್ಟು 39 ಜನರಿಗೆ ಮಹಾಮಾರಿ ವೈರಸ್ ವಕ್ಕರಿಸಿದೆ. ಇತ್ತೀಚಿಗೆ ಮಹಾರಾಷ್ಟ್ರದ ನಾನಾ ಭಾಗಗಳಿಂದ ಆಗಮಿಸಿದ್ದ ಇವರನ್ನೆಲ್ಲ ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು.
ಇಂದು ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರನ್ನೆಲ್ಲ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ನೂತನ ಜಿಲ್ಲಾಸ್ಪತ್ರೆಯ ಕೋವಿಡ್ 19 ವಾರ್ಡ್ಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 515 ಪ್ರಕರಣಗಳ ಪೈಕಿ 70 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ.
39 ಜನ ಸೋಂಕಿತರಲ್ಲಿ 18 ಮಹಿಳೆಯರು, 21ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಪ್ರಕರಣ ಸಂಖ್ಯೆ ಪಿ-5263, ಪಿ-5264ರ ವ್ಯಕ್ತಿಗಳು ಗುಜರಾತ್‍ನ ಅಹ್ಮದಾಬಾದ್‍ನಿಂದ ಮತ್ತು ಉಳಿದ 37 ಜನ ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದವರಾಗಿದ್ದಾರೆ.
ಮಹರಾಷ್ಟ್ರದಿಂದ ಆಗಮಿಸುತ್ತಿರುವ ಕಾರ್ಮಿಕರಲ್ಲೇ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳಿಂದ ಜಿಲ್ಲೆಯ ಜನರ ಆತಂಕ ಮಾತ್ರ ಮುಂದುವರೆದಿದೆ.