ಸುರಪುರ: ನಗರಸಭೆ ವ್ಯಾಪ್ತಿಯ ಸುರಪುರ ರಂಗಂಪೇಟೆ, ಕುಂಬಾರಪೇಟೆ, ತಿಮ್ಮಾಪುರ ಸೇರಿದಂತೆ 31 ವಾರ್ಡ್ಗಳಿಗೂ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರು ಕಲುಷಿತ ಆಗಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನದಿಯಿಂದ ನೀರನ್ನು ಶುದ್ಧೀಕರಣಗೊಳಿಸಿ ಮನೆಗಳಿಗೆ ಸರಬರಾಜು ಮಾಡುವ ನಿಯಮವಿದ್ದರೂ ಕೃಷ್ಣಾ ನದಿಯಿಂದ ಬರುವ ನೀರು ಯಾವುದೇ ಶುದ್ದೀಕರಣಗೊಳ್ಳದೆ ನೇರವಾಗಿ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ನದಿಯಲ್ಲಿರುವ ರಾಡಿ ಮಿಶ್ರಿತ ಕೊಳಚೆ ನೀರು ನೇರವಾಗಿ ಮನೆಗಳಿಗೆ ಬರುತ್ತಿದೆ. ಇಂತಹ ನೀರನ್ನು ಕುಡಿಯುವುದು ಹೇಗೆ? ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದರ ಕುರಿತು ಡಿಎಸ್ಎಸ್ ತಾಲೂಕು ಸಂಘಟನಾ ಸಂಚಾಲಕ ಶರಣಪ್ಪ ತಳವಾರಗೇರಾ ಮಾತನಾಡಿ, ನಗರಸಭೆ ಸರಬರಾಜು ಮಾಡುವ ನೀರು ಕಲುಷಿತವಾಗಿದ್ದು, ಕುಡಿಯುವುದಕ್ಕಾಗಲಿ, ದಿನಬಳಕೆಗಾಗಲೀ ಯೋಗ್ಯವಾಗಿಲ್ಲ. ಆದರೆ, ನಗರದ ಪ್ರತಿಶತ 90ರಷ್ಟು ಜನರು ಇಂತಹ ಗಲೀಜು ನೀರನ್ನು ಕುಡಿಯುವಂತಾಗಿದೆ. ಇದರಿಂದ ಕೆಮ್ಮು, ನೆಗಡಿ, ಮಲೇರಿಯಾ, ಕಾಲರಾದಂತ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ನಗರಸಭೆ ಕೂಡಲೇ ಎಚ್ಚೆತ್ತು ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಕುಡಿಯುವ ನೀರಿನ ಮಲಿನತೆಯಿಂದ ರೋಗ ಹರಡುವ ಸಂಭವ ಹೆಚ್ಚಾಗಿರಲಿದೆ. ನಗರಸಭೆ ಇನ್ನಾದರೂ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುತ್ತಾರೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಶರಣಪ್ಪ ತಳವಾರಗೇರಾ.