ಸುರಪುರ: ಎಂಟು ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಹುತಾತ್ಮನಾದ ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಯೋಧ ಶರಣಬಸವ ಕೆಂಗುರಿ ಸ್ಮರಣಾರ್ಥವಾಗಿ ಕಾರ್ಯಕ್ರಮವನ್ನು ಗೃಹ ರಕ್ಷಕ ದಳದಿಂದ ಆಚರಿಸಲಾಯಿತು.
ನಗರದ ತಹಶಿಲ್ ರಸ್ತೆಯಲ್ಲಿರುವ ಶರಣಬಸವ ಕೆಂಗುರಿ ಪುತ್ಥಳಿಯ ವೃತ್ತದಲ್ಲಿ ಗೃಹರಕ್ಷಕ ದಳದ ವತಿಯಿಂದ ಸ್ಮರಣೋತ್ಸವ ಕಾರ್ಯಕ್ರಮ ನಡೆಸಿ ಹುತಾತ್ಮ ಯೋಧನಿಗೆ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಭಾಗವಹಿಸಿ ವೀರಯೋಧನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಯೋಧನ ಸ್ಮರಣಾರ್ಥವಾಗಿ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿಯ ಕುರಿತು ಅರಿವು ಮೂಡಿಸಲಾಯಿತು.
ನಂತರ ಮಾತನಾಡಿದ ತಶೀಲ್ದಾರ್ ಅವರು, ಯೋಧರು ನಮ್ಮನ್ನು ಹಗಲಿರುಳು ಕಾಯುವ ಮೂಲಕ ದೇಶ ಸೇವೆಗೆ ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿರುತ್ತಾರೆ. ಈ ವೀರಯೋಧರನ್ನು ನಾವು ನಿತ್ಯವೂ ಸ್ಮರಿಸಬೇಕು ಎಂದರು.
ಕಂಪನಿ ಕಮಾಂಡೆಂಟ್ ಯಲ್ಲಪ್ಪ ಹುಲಕಲ್ ಮಾತನಾಡಿ, ಶರಣಬಸವ ಕೆಂಗುರಿ ಭಾರತೀಯ ಸೇನೆಗೆ ಸೇರುವ ಮುನ್ನ ಎರಡು ವರ್ಷ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ನಮ್ಮೊಂದಿಗೆ ಆತ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ ಗಳಿಗೆಯಾಗಿ ನೆನಪಿನಲ್ಲಿ ಉಳಿದಿವೆ ಎಂದರು.
ಕಾರ್ಯಕ್ರಮದಲ್ಲಿ ವೀರಯೋಧನ ತಂದೆ ಸೇರಿದಂತೆ ಕುಟುಂಬಸ್ಥರು ಹಾಗೂ ಎಲ್ಲಾ ಗೃಹರಕ್ಷಕ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.