ಯಾದಗಿರಿ : ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್ ಚಂದ್ರ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಕೆಲವೇ ಗಂಟೆಗಳಲ್ಲಿ, ಲ್ಯಾಂಡರ್ನಿಂದ ಪ್ರಜ್ಞಾನ್ ರೋವರ್ ಹೊರಬಂದಿದೆ. ಸದ್ಯ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಅನ್ವೇಷಣೆಯನ್ನು ಪ್ರಾರಂಭಿಸಿದೆ. ಈ ಸಂಬಂಧ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಐತಿಹಾಸಿಕ ಚಂದ್ರಯಾನದ ಸವಿನೆನಪಿಗಾಗಿ ಇಬ್ಬರು ಪೋಷಕರು ತಮ್ಮ ನವಜಾತ ಶಿಶುಗಳಿಗೆ ವಿಕ್ರಮ್ ಮತ್ತು ಪ್ರಜ್ಞಾನ್ ಎಂದು ನಾಮಕರಣ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಜನಿಸಿದ ಇಬ್ಬರು ಮಕ್ಕಳಿಗೆ ವಿಕ್ರಮ್ ಮತ್ತು ಪ್ರಜ್ಞಾನ್ ಎಂದು ಹೆಸರಿಡಲಾಗಿದೆ. ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ್ ಎಂದು ಹೆಸರಿಡಲಾಗಿದ್ದು, ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಜ್ಞಾನ್ ಎಂದು ನಾಮಕರಣ ಮಾಡಲಾಗಿದೆ.
ವಿಕ್ರಮ್ ಹೆಸರಿನ ಮಗು ಜು.28 ರಂದು ಹಾಗೂ ಪ್ರಜ್ಞಾನ್ ಹೆಸರಿನ ಮಗು ಆ.14 ರಂದು ಜನಿಸಿದೆ. ಈ ಎರಡು ಮಕ್ಕಳ ನಾಮಕರಣವನ್ನು ಆ.24 ರಂದು ಮಾಡಲಾಗಿತ್ತು. ಭಾರತದ ಐತಿಹಾಸಿಕ ಸಾಧನೆಯ ಸವಿನೆನಪಿಗಾಗಿ ಮತ್ತು ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಈ ಹೆಸರುಗಳನ್ನು ಇಟ್ಟಿರುವುದಾಗಿ ಪೋಷಕರು ತಿಳಿಸಿದ್ದಾರೆ.
ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ : ಚಂದ್ರಯಾನ ಯಶಸ್ವಿ ಹಿನ್ನೆಲೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಇಸ್ರೋದ ಅಧ್ಯಕ್ಷ ಸೋಮನಾಥ್ ಮತ್ತು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಐತಿಹಾಸಿಕ ಚಂದ್ರಯಾನ 3 ಯಶಸ್ವಿಯಾದ ಆಗಸ್ಟ್ 23ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು. "ಆಗಸ್ಟ್ 23 ಭಾರತದ ಧ್ವಜ ಚಂದ್ರನ ಮೇಲೆ ಹಾರಿದ ದಿನ. ಇನ್ನು ಮುಂದೆ ಈ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುತ್ತದೆ" ಎಂದರು.
ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ಕರೆಯಲಾಗುತ್ತದೆ. ಚಂದ್ರಯಾನ -2 ಯೋಜನೆಯ ಹೆಜ್ಜೆ ಗುರುತನ್ನು ತಿರಂಗಾ ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದು ಇದೇ ವೇಳೆ ಪ್ರಧಾನಿ ತಿಳಿಸಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ನೌಕೆಯ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೋ ಉಡುಗೊರೆಯಾಗಿ ನೀಡಿತು.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿ ಚಂದ್ರಯಾನ -3 ರಾಕೆಟ್ ಉಡಾವಣೆಗೊಂಡಿತ್ತು. ಸತತ 41 ದಿನಗಳ ಬಳಿಕ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿದಿತ್ತು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ.
ಇದನ್ನೂ ಓದಿ : ಇಸ್ರೋ ಚಂದ್ರೋದಯ! 'ನಾಲ್ಕು ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ'- ಇಸ್ರೋ ಅಧ್ಯಕ್ಷ ಸೋಮನಾಥ್