ಯಾದಗಿರಿ: ಸಚಿವ ಸಂಪುಟದಿಂದ ಪ್ರಭು ಚೌವ್ಹಾಣ್ ಅವರನ್ನ ಕೈ ಬಿಡುತ್ತಾರೆ ಎಂಬ ವಿಚಾರದ ಬಗ್ಗೆ ಖುದ್ದು ಅವರೇ ಯಾದಗಿರಿಯಲ್ಲಿಂದು ಪ್ರತಿಕ್ರಿಯೆ ನೀಡಿ, ನಮ್ಮ ಮಾಹಿತಿ ಪ್ರಕಾರ ಸಂಪುಟ ವಿಸ್ತರಣೆಯಾಗುತ್ತೆ, ಪುನರ್ ರಚನೆ ಇಲ್ಲ ಎಂದಿದ್ದಾರೆ.
ಯಾದಗಿರಿ ಜಿಲ್ಲೆಗೆ ಇಂದು ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದೀರಿ ಅಂತಾ ಸಿಎಂ ಹೇಳಿದ್ದಾರೆ. ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತೆ. ನಾನು ಬಿಜೆಪಿ ಪಕ್ಷದ ಶಿಸ್ತಿನ ಕಾರ್ಯಕರ್ತ. ನಾನು ಮೊದಲು ಮಂತ್ರಿಯಾಗುತ್ತೇನೆಂದು ನನಗೆ ಗೊತ್ತಿರಲಿಲ್ಲ. ಆದ್ರು ಬಿಜೆಪಿ ಪಕ್ಷವು ನನ್ನನ್ನು ಮಂತ್ರಿ ಮಾಡಿದೆ ಎಂದರು.
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಾಜಿ ಸಚಿವ ರೋಷನ್ ಬೇಗ್ ಕೆಟ್ಟ ಕೆಲಸ ಮಾಡಿದ್ದಾರೆ. ಹೀಗಾಗಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಬೇಗ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ಅವರನ್ನು ಬಂಧನ ಮಾಡಿ ವಿಚಾರಣೆ ಮಾಡುತ್ತಿದ್ದಾರೆ. ಸಿಬಿಐನವರು ಅವರ ಕೆಲಸ ಮಾಡುತ್ತಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ದ್ವೇಷ ರಾಜಕೀಯ ಮಾಡುತ್ತಿಲ್ಲ. ಬಿಜೆಪಿಯವರೇ ಇರಲಿ, ಯಾರೇ ಇರಲಿ ತಪ್ಪು ಮಾಡಿದ್ರೆ ತನಿಖೆ ಮಾಡುತ್ತಾರೆ. ನಾನು ತಪ್ಪು ಮಾಡಿದರೂ ವಿಚಾರಣೆ ಮಾಡುತ್ತಾರೆ ಎಂದರು.