ಯಾದಗಿರಿ: ಈ ವಾಟ್ಸ್ಆಪ್ - ಫೇಸ್ಬುಕ್ ಬಂದ ಮೇಲೆ ಹೆಂಡತಿಯೊಂದಿಗೆ ಮಾತನಾಡುವುದು ಕಷ್ಟ ಆಗಿದೆ. ವಾಟ್ಸ್ಆ್ಯಪ್ ಫೇಸ್ಬುಕ್ನಲ್ಲಿ ಆಡಿಯೋಗಳನ್ನ ಹರಿಬಿಡುತ್ತಿದ್ದು, ಪ್ರೈವೇಟ್ ಸ್ಪೇಸ್ ಅನ್ನೋದೇ ಇಲ್ಲ ಎಂದು ಬಿಜೆಪಿ ಶಾಸಕ ರಾಜುಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯಲ್ಲಿ ಬಿಎಸ್ವೈ ಆಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ರಾಜುಗೌಡ, ಬಿಎಸ್ ಯಡಿಯೂರಪ್ಪ ಅವರ ವಿಡಿಯೋ ತಿರುಚಲಾಗಿದೆ ಎಂದು ಸಮರ್ಥನೆ ಮಾಡಿಕೊಂಡರು. ಬಿಜೆಪಿ ಕಾರ್ಯಕರ್ತರೇ ಬಿಎಸ್ವೈ ವಿಡಿಯೋ ಬಹಿರಂಗ ಮಾಡಿರಬಹುದು. ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ಸರ್ಕಾರ ರಚನೆಯಾಗಿದೆ. ಅನರ್ಹರು ರಾಜೀನಾಮೆ ನೀಡದಿದ್ದರೆ ನಾವು ಅಧಿಕಾರಕ್ಕೆ ಬರುತ್ತಿರಲಿಲ್ಲ. ವೈಯಕ್ತಿಕ ಸಮಸ್ಯೆಗಳಿಂದ ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.
ಇನ್ನು ವಾಲ್ಮೀಕಿ ಸಮಾಜಕ್ಕೆ ಮೀಸಲು ಹೆಚ್ಚಳ ಮಾಡದಿದ್ದರೆ, ವಾಲ್ಮೀಕಿ ಪೀಠದ ಸ್ವಾಮೀಜಿ ಜೊತೆಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ರೂಪಿಸುವುದಾಗಿ ಶಾಸಕ ರಾಜುಗೌಡ ಹೇಳಿದ್ದಾರೆ. ಇದೇ ವೇಳೆ, ಶ್ರೀಗಳು ರಾಜೀನಾಮೆ ನೀಡುವಂತೆ ಸೂಚಿಸಿದ್ರೆ ಅದಕ್ಕೂ ತಾವು ಸಿದ್ಧ ಎಂದರು.